ನವದೆಹಲಿ: ದೇಶದ ಅತ್ಯಂತ ದೊಡ್ಡದಾದ ಎಲ್‌ಐಸಿ ಐಪಿಒ ಪ್ರಕ್ರಿಯೆ ನಡೆಯುತ್ತಿದೆ. ಎಲ್‌ಐಸಿ ಐಪಿಒದ ಚಿಲ್ಲರೆ ವಿಭಾಗವು ಮೂರನೇ ದಿನದ ಬಿಡ್ಡಿಂಗ್‌ನ ಮೊದಲ ಗಂಟೆಯಲ್ಲಿ ಪೂರ್ಣಗೊಂಡಿದೆ. ಶುಕ್ರವಾರ ಬೆಳಗ್ಗೆ 11:36ಕ್ಕೆ ಸ್ಟಾಕ್ ಎಕ್ಸ್‌ಚೇಂಜ್‌ಗಳಲ್ಲಿನ ಮಾಹಿತಿಯ ಪ್ರಕಾರ, ಚಿಲ್ಲರೆ ವೈಯಕ್ತಿಕ ಹೂಡಿಕೆದಾರರ (Retail Individual Investor -RII) ವಿಭಾಗಕ್ಕೆ 6.9 ಕೋಟಿ ಷೇರುಗಳನ್ನು ಮೀಸಲಿಡಲಾಗಿತ್ತು. ಆದರೆ, ಈಗ ಅದು 7.2 ಕೋಟಿ ಬಿಡ್ ಗಳಿಸಿದೆ. ಅಂದರೆ ಅದು ಸಂಪೂರ್ಣವಾಗಿ ಚಂದಾದಾರಿಕೆಯಾಗಿದೆ.
ಅರ್ಹ ಸಾಂಸ್ಥಿಕ ಖರೀದಿದಾರ (Qualified Institutional Buyer-QIB) ಮತ್ತು ಸಾಂಸ್ಥಿಕವಲ್ಲದ ಹೂಡಿಕೆದಾರರ (Non-Institutional Investor-NII) ವಿಭಾಗವು ನೀರಸ ಪ್ರತಿಕ್ರಿಯೆ ಪಡೆಯುತ್ತಿದೆ. ಸಾಂಸ್ಥಿಕವಲ್ಲದ ಹೂಡಿಕೆದಾರರ ಭಾಗವು ಶೇಕಡಾ 50ರಷ್ಟು ಚಂದಾದಾರಿಕೆ ಪಡೆದುಕೊಂಡಿದ್ದರೆ, ಅರ್ಹ ಸಾಂಸ್ಥಿಕ ಖರೀದಿದಾರ ವಿಭಾಗವು ಇನ್ನೂ ಶೇಕಡಾ 40ರಷ್ಟು ಖಾಲಿಯಿದೆ.
ಪಾಲಿಸಿದಾರರ ಭಾಗವು ಮೂರು ಪಟ್ಟು ಹೆಚ್ಚು ಚಂದಾದಾರರಾಗಿದ್ದರೆ, ಕಾಯ್ದಿರಿಸಿದ ಉದ್ಯೋಗಿಗಳ ವಿಭಾಗವು ಸುಮಾರು ಎರಡೂವರೆ ಪಟ್ಟು ಹೆಚ್ಚು ಚಂದಾದಾರಿಕೆಯಾಗಿದೆ. ಒಟ್ಟಾರೆಯಾಗಿ, ಐಪಿಒದಲ್ಲಿ 16,20,78,067 ಷೇರುಗಳ ಮಾರಾಟ ಮಾಡಲಾಗುತ್ತಿತ್ತು. ಆದರೆ ಈಗಾಗಲೇ 17,98,42,980 ಬಿಡ್‌ಗಳನ್ನು ಸ್ವೀಕರಿಸಿರುವುದರಿಂದ ಸಂಪೂರ್ಣ ಚಂದಾದಾರಿಕೆ ಪಡೆದಿದೆ. ಎಲ್‌ಐಸಿ ಐಪಿಒ ಮೇ 9ರಂದು ಮುಕ್ತಾಯಗೊಳ್ಳಲಿದೆ. ವಿಮಾ ಭೀಮ್‌ನಲ್ಲಿ ತನ್ನ ಶೇಕಡಾ 3.5ರಷ್ಟು ಪಾಲನ್ನು ಹಂಚುವ ಮೂಲಕ ಸುಮಾರು 21,000 ಕೋಟಿ ರೂಪಾಯಿಗಳನ್ನು ಗಳಿಸುವ ಗುರಿಯನ್ನು ಸರ್ಕಾರ ಹೊಂದಿದೆ.
ಎಲ್‌ಐಸಿ ಪ್ರತಿ ಈಕ್ವಿಟಿ ಷೇರಿನ ಬೆಲೆಯನ್ನು 902 ರಿಂದ 949 ರೂಪಾಯಿಗೆ ನಿಗದಿಪಡಿಸಿದೆ. ಆಫರ್ ಅರ್ಹ ಉದ್ಯೋಗಿಗಳು ಮತ್ತು ಪಾಲಿಸಿದಾರರಿಗೆ ಮೀಸಲಾತಿ ಒಳಗೊಂಡಿದೆ. ಚಿಲ್ಲರೆ ಹೂಡಿಕೆದಾರರು ಮತ್ತು ಅರ್ಹ ಉದ್ಯೋಗಿಗಳು ಪ್ರತಿ ಈಕ್ವಿಟಿ ಷೇರಿಗೆ 45 ರೂಪಾಯಿ ರಿಯಾಯಿತಿ ಪಡೆಯುತ್ತಾರೆ ಮತ್ತು ಪಾಲಿಸಿದಾರರು ಪ್ರತಿ ಈಕ್ವಿಟಿ ಷೇರಿಗೆ 60 ರೂಪಾಯಿ ರಿಯಾಯಿತಿ ಪಡೆಯುತ್ತಾರೆ. 22.13 ಕೋಟಿ ಈಕ್ವಿಟಿ ಷೇರುಗಳ ಆಫರ್ ಫಾರ್ ಸೇಲ್ (OFS) ಮೂಲಕ ಷೇರು ಮಾರಾಟವಾಗಿದೆ. ಷೇರುಗಳು ಮೇ 17ರಂದು ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗುವ ಸಾಧ್ಯತೆ ಇದೆ.
ಎಲ್‌ಐಸಿ ಐಪಿಒ ದೇಶದಲ್ಲೇ ಅತ್ಯಂತ ದೊಡ್ಡ ಐಪಿಒ ಆಗಿದೆ. 2021ರಲ್ಲಿ ಪೇಟಿಯಂ ಐಪಿಒದಿಂದ 18,300 ಕೋಟಿ ರೂಪಾಯಿ ಗಳಿಸಲಾಗಿತ್ತು. 2010ರಲ್ಲಿ ಕೋಲ್ ಇಂಡಿಯಾ ಸುಮಾರು 15,500 ಕೋಟಿ ರೂಪಾಯಿ ಪಡೆದಿತ್ತು. 2008ರಲ್ಲಿ ರಿಲಯನ್ಸ್ ಪವರ್ 11,700 ಕೋಟಿ ರೂಪಾಯಿ ಗಳಿಸಿತ್ತು.
ಇದನ್ನೂ ಓದಿ: ಬೆಂಗಳೂರು ಸೇರಿ ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನ-ಬೆಳ್ಳಿ ದರ ಹೀಗಿದೆ...