ಹೊಸದಿಲ್ಲಿ: ಮೇ 4 ರಿಂದ ಆರಂಭವಾಗಲಿರುವ ಭಾರತೀಯ ಜೀವ ವಿಮಾ ನಿಗಮದ ಆರಂಭಿಕ ಸಾರ್ವಜನಿಕ ಕೊಡುಗೆ(ಐಪಿಒ)ಯ ಭಾಗವಾಗಿ ಪ್ರತಿ ಈಕ್ವಿಟಿ ಷೇರಿನ ಬೆಲೆಯನ್ನು 902 ರಿಂದ 949 ರೂ.ಗೆ ನಿಗದಿಪಡಿಸಲಾಗಿದೆ. ಈ ಮೂಲಕ 21 ಸಾವಿರ ಕೋಟಿ ರೂಪಾಯಿ ಮೊತ್ತವನ್ನು ಸಂಗ್ರಹಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆ ಕಾರ್ಯದರ್ಶಿ ತುಹಿನ್ ಕಾಂತಾ ಪಾಂಡೆ, ಎಲ್‌ಐಸಿಯ ಐಪಿಒ ಗಾತ್ರವು ದೇಶದಲ್ಲಿಯೇ ಇಲ್ಲಿಯವರೆಗಿನ ಅತಿ ದೊಡ್ಡದಾಗಿರಲಿದೆ. ಸರ್ಕಾರ ತನ್ನ ಈಕ್ವಿಟಿ ಷೇರಿನ 3.5 ಪ್ರತಿಶತ ಅಥವಾ 22.13 ಕೋಟಿ ಷೇರುಗಳನ್ನು ಮಾರಾಟ ಮಾಡುವ ಮೂಲಕ 21 ಕೋಟಿ ರೂ.ಗಳನ್ನು ಸಂಗ್ರಹಿಸುವ ಗುರಿ ಹಾಕಿಕೊಂಡಿದೆ ಎಂದರು.
ಮಾರುಕಟ್ಟೆಯ ಏರಿಳಿತದಿಂದಾಗಿ ಐಪಿಒ ಗಾತ್ರವನ್ನು ಕಡಿಮೆ ಮಾಡಲು ಸರ್ಕಾರ ನಿರ್ಧರಿಸಿದೆ. ಬಂಡವಾಳ ಮಾರುಕಟ್ಟೆಯನ್ನು ಪರಿಗಣಿಸಿ ಈ ನಿರ್ಧಾರಕ್ಕೆ ಬರಲಾಗಿದೆ. ಬಂಡವಾಳ ಮತ್ತು ವಿತ್ತೀಯ ಪೂರೈಕೆಯ ಆಧಾರದ ಐಪಿಒ ಬೆಲೆ ನಿಗದಿ ಮಾಡಲಾಗಿದೆ ಎಂದು ಅವರು ಹೇಳಿದರು.
ಆರಂಭವಾಗಲಿರುವ ಐಪಿಒ ಮಾರಾಟಕ್ಕಾಗಿಯೇ ನೀಡಲಾದ ಕೊಡುಗೆಯಾಗಿದೆ. ಮಾರಾಟಕ್ಕಿರುವ 22.13 ಕೋಟಿ ಷೇರುಗಳಲ್ಲಿ ಸುಮಾರು 5.93 ಕೋಟಿ ಷೇರುಗಳನ್ನು ಆಂಕರ್ ಹೂಡಿಕೆದಾರರದ್ದಾಗಿದ್ದರೆ, ನೌಕರರ ಭಾಗವು 1.58 ಮಿಲಿಯನ್ ಆಗಿದೆ. ಪಾಲಿಸಿದಾರರದ್ದು 22.14 ಮಿಲಿಯನ್ ಆಗಿರಲಿದೆ ಎಂದು ಅವರು ಮಾಹಿತಿ ನೀಡಿದರು.
ಅರ್ಧದಷ್ಟು ಷೇರುಗಳನ್ನು ಅರ್ಹ ಸಾಂಸ್ಥಿಕ ಖರೀದಿದಾರರಿಗೆ ಕಾಯ್ದಿರಿಸಲಾಗಿದೆ. ಶೇ.15ರಷ್ಟು ಷೇರುಗಳನ್ನು ಸಾಂಸ್ಥಿಕವಲ್ಲದ ಹೂಡಿಕೆದಾರರಿಗೆ ಮೀಸಲಿಡಲಾಗಿದೆ. ಉಳಿದವು ಚಿಲ್ಲರೆ ಹೂಡಿಕೆದಾರರಿಗೆ ಸಿಗಲಿದೆ. ಪಾಲಿಸಿದಾರರು ಪ್ರತಿ ಈಕ್ವಿಟಿ ಷೇರಿಗೆ 60 ರೂಪಾಯಿಗಳ ರಿಯಾಯಿತಿಯನ್ನು ಪಡೆದುಕೊಳ್ಳಲಿದ್ದು, ಚಿಲ್ಲರೆ ಮತ್ತು ಉದ್ಯೋಗಿಗಳಿಗೆ 40 ರೂಪಾಯಿ ರಿಯಾಯಿತಿ ಸಿಗಲಿದೆ. ಮೇ 4 ರಿಂದ ಆರಂಭವಾಗುವ ಐಪಿಒ ಮಾರಾಟ ಮೇ 9 ರಂದು ಕೊನೆಗೊಳ್ಳಲಿದೆ ಎಂದು ಅವರು ವಿವರಿಸಿದರು.
ಇದನ್ನೂ ಓದಿ: ಪೆಟ್ರೋಲ್ - ಡೀಸೆಲ್ ಮೇಲಿನ ತೆರಿಗೆ ಕಡಿತಗೊಳಿಸಿ: ರಾಜ್ಯಗಳಿಗೆ ಪ್ರಧಾನಿ ಒತ್ತಾಯ