ಹೈದರಾಬಾದ್: ತೆರಿಗೆದಾರರು ತಮ್ಮ ಹಣವನ್ನು ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳು ನೀಡುವ ತೆರಿಗೆ - ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುವ ಮೂಲಕ ತಮ್ಮ ಮೇಲಿನ ಹೊರೆ ಕಡಿಮೆ ಮಾಡಬಹುದು. ಇದಕ್ಕಾಗಿ ಅವರು ತಮ್ಮ ಆದಾಯ ತೆರಿಗೆ ಹೊರೆಯನ್ನು ಕಡಿಮೆ ಮಾಡಲು ಸೂಕ್ತ ಯೋಜನೆಗಳನ್ನು ರೂಪಿಸಬೇಕಾಗುತ್ತದೆ.
ತೆರಿಗೆ ವಿನಾಯಿತಿ ಯೋಜನೆಗಳಲ್ಲಿ ಎಷ್ಟು ಹೂಡಿಕೆ ಮಾಡಬೇಕು ಎಂದು ಅವರು ಯೋಚಿಸಬೇಕು. ಆದಾಗ್ಯೂ ಹೂಡಿಕೆ ಮಾಡುವಾಗ ತೆರಿಗೆ ವಿನಾಯಿತಿ ಮಾತ್ರ ಉದ್ದೇಶವಾಗಿರಬಾರದು. ಅದು ಭವಿಷ್ಯದಲ್ಲಿ ನಮ್ಮ ಅಗತ್ಯಗಳನ್ನು ಪೂರೈಸಬೇಕು. ಬುದ್ಧಿವಂತಿಕೆಯಿಂದ ಹೂಡಿಕೆ ಮಾಡುವ ಮೂಲಕ ಎಲ್ಲಿ ಹೂಡಿಕೆ ಮಾಡಬೇಕು ಮತ್ತು ನಮ್ಮ ಹೊರೆಯನ್ನು ಎಷ್ಟು ಕಡಿಮೆ ಮಾಡಬಹುದು ಎಂಬುದನ್ನು ನೋಡುವುದಾದರೆ,
ನಮ್ಮ ಸಂಪೂರ್ಣ ಹೆಚ್ಚುವರಿ ಆದಾಯವನ್ನು ತೆರಿಗೆ ಉಳಿಸುವ ಯೋಜನೆಗಳಿಗೆ ಹೂಡಿಕೆ ಮಾಡುವುದರಿಂದ ಹೆಚ್ಚಿನ ಪ್ರಯೋಜನವಾಗುವುದಿಲ್ಲ. ಉದಾಹರಣೆಗೆ, ನಿಮ್ಮ ಬಳಿ ಹೂಡಿಕೆ ಮಾಡಲು 5 ಲಕ್ಷ ರೂಪಾಯಿ ಇದೆ ಎಂದು ಭಾವಿಸೋಣ. ಇವುಗಳನ್ನು ಸೆಕ್ಷನ್ 80 ಸಿ ಅಡಿ ಯೋಜನೆಗಳಲ್ಲಿ ಹೂಡಿಕೆ ಮಾಡಬಹುದು. ಆದರೆ, ಈ ಸೆಕ್ಷನ್ ಅಡಿ ಗರಿಷ್ಠ 1,50,000 ರೂ.ಗಳಷ್ಟು ಹೂಡಿಕೆ ಮಾಡಲು ಮಾತ್ರವೇ ಅವಕಾಶ ಇದೆ. ಇದಕ್ಕಿಂತ ಹೆಚ್ಚಿನ ಹೂಡಿಕೆ ಮೇಲೆ ತೆರಿಗೆ ವಿನಾಯಿತಿ ಸಿಗುವುದಿಲ್ಲ.
ಸುರಕ್ಷಿತ ಹೂಡಿಕೆ ಮಾಡಿ: ಆದ್ದರಿಂದ, ಹೂಡಿಕೆ ಮಾಡುವಾಗ ನಾವು - ನೀವೆಲ್ಲ ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಉದ್ಯೋಗಿಗಳಿಗೆ ಉದ್ಯೋಗ ಭವಿಷ್ಯ ನಿಧಿ (ಇಪಿಎಫ್) ಇದೆ. ಆದ್ದರಿಂದ, ಇದಕ್ಕಾಗಿ ನೀವು ಎಷ್ಟು ಪಾವತಿ ಮಾಡುತ್ತಿದ್ದೀರಿ ಎಂಬುದನ್ನು ಪರಿಶೀಲಿಸಿ. ಆ ಬಳಿಕ ಅಗತ್ಯ ಇರುವ ಮೊತ್ತವನ್ನು ತೆರಿಗೆ - ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಲು ಯೋಚಿಸಿ. PPF, ELSS, ತೆರಿಗೆ ಉಳಿತಾಯ ಸ್ಥಿರ ಠೇವಣಿಗಳು, ಜೀವ ವಿಮಾ ಪ್ರೀಮಿಯಂ, ಹಿರಿಯ ನಾಗರಿಕ ಉಳಿತಾಯ ಯೋಜನೆ ಮತ್ತು ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳಲ್ಲಿ ಹಣ ತೊಡಗಿಸಬಹುದು. ಸೆಕ್ಷನ್ 80ಸಿ ಮಿತಿ 1,50,000 ರೂ.ಗಳಿದ್ದು, ಅಷ್ಟು ಹೂಡಿಕೆ ಮಾಡಿ. ELSS ಹೊರತುಪಡಿಸಿ, ಉಳಿದೆಲ್ಲವೂ ಸುರಕ್ಷಿತ ಯೋಜನೆಗಳಾಗಿವೆ.
ಕಿರಿಯ ವಯಸ್ಸಿನವರು ಯಾವುದರಲ್ಲಿ ಹೂಡಿಕೆ ಮಾಡಬೇಕು: ಕಿರಿಯ ವಯಸ್ಸಿನವರು ತೆರಿಗೆ ಉಳಿತಾಯಕ್ಕಾಗಿ ಇಕ್ವಿಟಿ - ಆಧಾರಿತ ಉಳಿತಾಯ ಯೋಜನೆಗಳನ್ನು (ELSS) ನೋಡಬಹುದು. ಇವುಗಳು ಮೂರು ವರ್ಷಗಳ ಲಾಕ್ - ಇನ್ ಅವಧಿ ಹೊಂದಿರುತ್ತವೆ. ಹೆಚ್ಚಿನ ನಷ್ಟ ಸಹಿಷ್ಣುತೆ ಹೊಂದಿರುವವರಿಗೆ ಇವು ಸೂಕ್ತವಾಗಿವೆ.
ಮಧ್ಯವಯಸ್ಸಿನಲ್ಲಿರುವವರು ELSS ಗೆ ಸ್ವಲ್ಪ ಮೊತ್ತ ನಿಗದಿಪಡಿಸಬೇಕು ಮತ್ತು ಉಳಿದ ಹಣವನ್ನು ಸುರಕ್ಷಿತ ಯೋಜನೆಗಳಲ್ಲಿ ಹೂಡಿಕೆ ಮಾಡಬೇಕು. NPS ನಲ್ಲಿ 50,000 ರೂ.ವರೆಗೆ ಹೂಡಿಕೆ ಮಾಡುವ ಮೂಲಕ ಹೆಚ್ಚುವರಿ ತೆರಿಗೆ ವಿನಾಯಿತಿ ಅವಕಾಶವನ್ನು ಪಡೆದುಕೊಳ್ಳಬಹುದು. ಹೆಚ್ಚುವರಿ ಮೊತ್ತ ಹೆಚ್ಚಿರುವವರು ಮತ್ತು ಶೇ.25 - 30ಕ್ಕಿಂತ ಹೆಚ್ಚಿನ ತೆರಿಗೆ ಶ್ರೇಣಿಯಲ್ಲಿರುವವರು ಅದನ್ನು ಪರಿಶೀಲಿಸಬೇಕು.
ಇಪಿಎಫ್‌ನಲ್ಲಿ ಹಣ ತೊಡಗಿಸುವುದು ಲಾಭದಾಯಕವೇ?: ನಿವೃತ್ತಿಯ ಸಮೀಪದಲ್ಲಿರುವವರು ಹೂಡಿಕೆಗೆ ನಿಗದಿಪಡಿಸಿದ ಮೊತ್ತದ ಶೇ.60ರಷ್ಟು ಸುರಕ್ಷಿತ ಯೋಜನೆಗಳಲ್ಲಿ ಹೂಡಿಕೆ ಮಾಡಬೇಕು. ಹಾಗೆ ಇಪಿಎಫ್‌ನಲ್ಲಿ ಠೇವಣಿ ಇಡುವುದು ಸುರಕ್ಷಿತ. ಆದ್ದರಿಂದ, ಹೂಡಿಕೆ ಮೊತ್ತವನ್ನು ನಿರ್ಧರಿಸುವಾಗ ಇದೆಲ್ಲವನ್ನೂ ಪರಿಗಣಿಸಬೇಕು. ಹೂಡಿಕೆ ಮಾಡುವಾಗ ತೆರಿಗೆ ಉಳಿತಾಯ ಮಾತ್ರವಲ್ಲ, ಭವಿಷ್ಯದ ಆರ್ಥಿಕ ಗುರಿಗಳನ್ನು ಸಾಧಿಸಲು ಸೂಕ್ತವಾದ ಯೋಜನೆಯನ್ನು ಸಹ ಗಮನದಲ್ಲಿಟ್ಟುಕೊಳ್ಳಬೇಕು.
ಹೆಚ್ಚಿನ ಲಾಭದಾಯಕ ಯೋಜನೆಗಳು ತೆರಿಗೆ ಪ್ರಯೋಜನಗಳನ್ನು ಹೊಂದಿಲ್ಲವಾದರೂ, ದೀರ್ಘಾವಧಿಯಲ್ಲಿ ಹೂಡಿಕೆಯಲ್ಲಿ ಅವುಗಳು ಉತ್ತಮ ಪ್ರಯೋಜನಗಳನ್ನು ತಂದು ಕೊಡುತ್ತವೆ ಎಂದು ಟ್ರೇಡ್‌ಸ್ಮಾರ್ಟ್‌ನ ಸಿಇಒ ವಿಕಾಸ್ ಸಿಂಘಾನಿಯಾ ಅಭಿಪ್ರಾಯಪಟ್ಟಿದ್ದಾರೆ.
ಇದನ್ನು ಓದಿ:ಡೀಸೆಲ್, ಪೆಟ್ರೋಲ್ ರಫ್ತಿನ ಮೇಲೆ ತೆರಿಗೆ ಜೊತೆ ವಿಂಡ್ ಫಾಲ್ ತೆರಿಗೆ ಹಚ್ಚಿಸಿದ ಸರ್ಕಾರ!