ನವದೆಹಲಿ : ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ 4 ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದಿದ್ದು, ಭಾರತೀಯ ಆರ್ಥಿಕತೆಗೆ ದೊಡ್ಡ ಮಟ್ಟದ ಉತ್ತೇಜನ ಸಿಗುವ ನಿರೀಕ್ಷೆಯಿದೆ. ಬೃಹತ್ ತೈಲ ಆಮದು ವೆಚ್ಚದಿಂದಾಗಿ ದೇಶದ ಚಾಲ್ತಿ ಖಾತೆ ಕೊರತೆ ನಿಯಂತ್ರಣ ಮೀರಲು ಪ್ರಾರಂಭಿಸಿತ್ತು ಮತ್ತು ದುಬಾರಿ ತೈಲವನ್ನು ಖರೀದಿಸಲು ಹೆಚ್ಚು ಡಾಲರ್ಗಳನ್ನು ನೀಡಬೇಕಾಗಿದ್ದರಿಂದ ರೂಪಾಯಿ ದುರ್ಬಲಗೊಳ್ಳಲಾರಂಭಿಸಿತ್ತು.
ಪ್ರಸ್ತುತ ಜಾಗತಿಕ ಬೆಂಚ್ಮಾರ್ಕ್ ಬ್ರೆಂಟ್ ಕಚ್ಚಾ ತೈಲದ ಬೆಲೆ ಗುರುವಾರ ಬ್ಯಾರೆಲ್ ಗೆ ಶೇಕಡಾ 4.63 ರಷ್ಟು ಕುಸಿದು 77.42 ಡಾಲರ್ಗೆ ತಲುಪಿದ್ದರೆ, ಯುಎಸ್ನ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ ಕ್ರೂಡ್ ಆಯಿಲ್ ಫ್ಯೂಚರ್ಸ್ ಶೇಕಡಾ 4.9 ರಷ್ಟು ಕುಸಿದು ಬ್ಯಾರೆಲ್ಗೆ 72.90 ಡಾಲರ್ಗೆ ತಲುಪಿದೆ.
ಯುಎಸ್ ಕಚ್ಚಾ ತೈಲ ದಾಸ್ತಾನುಗಳಲ್ಲಿನ ಹೆಚ್ಚಳ, ಯುಎಸ್ ಖಜಾನೆ ಇಳುವರಿಯಲ್ಲಿ ಚೇತರಿಕೆ ಮತ್ತು ಜಾಗತಿಕ ಆರ್ಥಿಕ ಕುಸಿತದಿಂದಾಗಿ ತೈಲ ಬೇಡಿಕೆ ಕಡಿಮೆಯಾಗಿರುವುದು ಕಚ್ಚಾ ಬೆಲೆಗಳ ಕುಸಿತಕ್ಕೆ ಕಾರಣವಾಗಿದೆ. ವಾಸ್ತವವಾಗಿ ಕಳೆದ ನಾಲ್ಕು ವಾರಗಳಿಂದ ಕಚ್ಚಾ ತೈಲ ಬೆಲೆಗಳು ಕ್ರಮೇಣ ಕಡಿಮೆಯಾಗುತ್ತಿವೆ.
ಭಾರತದ ಸರಕು ವ್ಯಾಪಾರ ಕೊರತೆ ಅಕ್ಟೋಬರ್ನಲ್ಲಿ ದಾಖಲೆಯ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿತ್ತು. ಸದ್ಯ ತೈಲ ಬೆಲೆ ಇಳಿಕೆಯಾಗುತ್ತಿರುವುದರಿಂದ ವ್ಯಾಪಾರ ಕೊರತೆ ಕಡಿಮೆಯಾಗುವ ನಿರೀಕ್ಷೆಯಿದೆ. ಭಾರತವು ತನ್ನ ಕಚ್ಚಾ ತೈಲ ಅಗತ್ಯದ ಶೇಕಡಾ 80 ಕ್ಕಿಂತ ಹೆಚ್ಚು ಆಮದು ಮಾಡಿಕೊಳ್ಳುತ್ತದೆ ಮತ್ತು ಜಾಗತಿಕ ತೈಲ ಬೆಲೆಗಳಲ್ಲಿ ಹೆಚ್ಚಳವಾದಾಗ ಚಾಲ್ತಿ ಖಾತೆ ಕೊರತೆಯ ತೀವ್ರ ಹೆಚ್ಚಳಕ್ಕೆ ಕಾರಣವಾಗುತ್ತದೆ.
ಹೆಚ್ಚಿನ ತೈಲ ಬೆಲೆಗಳು ಹಣದುಬ್ಬರವನ್ನು ಹೆಚ್ಚಿಸುತ್ತವೆ ಮತ್ತು ಎಲ್ಪಿಜಿ, ಸಿಎನ್ಜಿ ಮತ್ತು ರಸಗೊಬ್ಬರಗಳ ಮೇಲಿನ ಸರ್ಕಾರದ ಸಬ್ಸಿಡಿ ವೆಚ್ಚ ಹೆಚ್ಚಾಗಲು ಕಾರಣವಾಗುತ್ತವೆ. ಇದು ಹೆಚ್ಚಿನ ವಿತ್ತೀಯ ಕೊರತೆಗೆ ಕಾರಣವಾಗುತ್ತದೆ.
ಒಪೆಕ್ ಮತ್ತು ಅಂತರರಾಷ್ಟ್ರೀಯ ಇಂಧನ ಸಂಸ್ಥೆ (ಐಇಎ) ಈ ಎರಡೂ ಸಂಸ್ಥೆಗಳು ನಾಲ್ಕನೇ ತ್ರೈಮಾಸಿಕದಲ್ಲಿ ತೈಲ ಪೂರೈಕೆ ಪ್ರಮಾಣ ಕಡಿಮೆಯಾಗಬಹುದೆಂದು ಹೇಳಿದ್ದವು. ಆದರೆ ಯುಎಸ್ ಡೇಟಾ ನೋಡಿದರೆ ದಾಸ್ತಾನು ಹೇರಳವಾಗಿದೆ ಎಂದು ಬುಧವಾರ ತೋರಿಸಿದೆ. ಯುಎಸ್ ಕಚ್ಚಾ ತೈಲ ದಾಸ್ತಾನು ಕಳೆದ ವಾರ 3.6 ಮಿಲಿಯನ್ ಬ್ಯಾರೆಲ್ಗಳಷ್ಟು ಏರಿಕೆಯಾಗಿ 421.9 ಮಿಲಿಯನ್ ಬ್ಯಾರೆಲ್ಗಳಿಗೆ ತಲುಪಿದೆ. ಗಾಜಾದಲ್ಲಿ ಇಸ್ರೇಲ್-ಹಮಾಸ್ ಸಂಘರ್ಷ ಉಲ್ಬಣಗೊಳ್ಳುತ್ತಿರುವ ಮಧ್ಯೆ, ಹಮಾಸ್ ಅನ್ನು ದೀರ್ಘಕಾಲದಿಂದ ಬೆಂಬಲಿಸುತ್ತಿರುವ ಇರಾನ್ ವಿರುದ್ಧ ತೈಲ ನಿರ್ಬಂಧಗಳನ್ನು ಜಾರಿಗೊಳಿಸುವುದಾಗಿ ಯುಎಸ್ ಅಧಿಕಾರಿಗಳು ಬುಧವಾರ ಹೇಳಿದ್ದಾರೆ.
ಇದನ್ನೂ ಓದಿ : ಒಣ ಹೂ ಮತ್ತು ತ್ಯಾಜ್ಯದ ಮರು ಬಳಕೆ ಹೇಗೆ? ಇಲ್ಲಿದೆ ಮಾಹಿತಿ