ಹೈದರಾಬಾದ್: ನೀವು ಯಾವುದಾದರೂ ಸಾಲವನ್ನು ಪಡೆದಿದ್ದರೆ ಅದನ್ನು ಸಕಾಲಕ್ಕೆ ಮರುಪಾವತಿ ಮಾಡುವುದು ಬಹಳ ಅಗತ್ಯ. ಒಂದು ವೇಳೆ ನೀವು ಸಾಲ ಮರುಪಾವತಿ ಮಾಡಲು ವಿಫಲರಾದಲ್ಲಿ ಬಾಕಿ ಮೊತ್ತ ವಸೂಲಿ ಮಾಡಲು ಬ್ಯಾಂಕಿನವರು ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳುತ್ತಾರೆ. ಆದರೆ, ಸಾಲ ಮರುಪಾವತಿಯ ಅವಧಿಯಲ್ಲಿ ಅಕಸ್ಮಾತ್ ಸಾಲ ಪಡೆದ ವ್ಯಕ್ತಿಯು ಮೃತಪಟ್ಟಲ್ಲಿ ಏನಾಗುತ್ತದೆ? ಆಗ ಸಾಲ ಮರುಪಾವತಿಗೆ ಯಾರು ಜವಾಬ್ದಾರರಾಗುತ್ತಾರೆ? ಇದು ತೆಗೆದುಕೊಂಡ ಸಾಲ ಮತ್ತು ನೀಡಿದ ಗ್ಯಾರಂಟಿಯನ್ನು ಅವಲಂಬಿಸಿರುತ್ತದೆ. ವಿಭಿನ್ನ ಸಂದರ್ಭಗಳಲ್ಲಿ ಈ ನಿಯಮಗಳು ಹೇಗೆ ಅನ್ವಯವಾಗುತ್ತವೆ ಎಂಬುದನ್ನು ತಿಳಿಯೋಣ ಬನ್ನಿ.
ಪ್ರಾಥಮಿಕ ಸಾಲಗಾರನಿಗೆ ಏನಾದರೂ ಆದಲ್ಲಿ ಬ್ಯಾಂಕು ಸಹ - ಸಾಲಗಾರನನ್ನು ಸಂಪರ್ಕಿಸುತ್ತದೆ. ಒಂದು ವೇಳೆ ಸಹ-ಸಾಲಗಾರನು ಸಾಲ ಮರುಪಾವತಿ ಮಾಡದಿದ್ದರೆ ಗ್ಯಾರಂಟಿ ನೀಡಿದವರು ಅಥವಾ ಸಾಲಗಾರನ ಉತ್ತರಾಧಿಕಾರಿಗಳನ್ನು ಬ್ಯಾಂಕ್ ಸಂಪರ್ಕಿಸುತ್ತದೆ. ಉದಾಹರಣೆಗೆ- ಗೃಹ ಸಾಲ ಪಡೆದ ವ್ಯಕ್ತಿಯೊಬ್ಬ ಲೋನ್ ಕವರ್ ಟರ್ಮ್ ಪಾಲಿಸಿಯನ್ನು ಪಡೆದಿದ್ದರೆ, ವಿಮಾ ಕಂಪನಿಯಿಂದ ಸಿಗುವ ಮೊತ್ತದಲ್ಲಿ ಸಾಲವನ್ನು ಹೊಂದಾಣಿಕೆ ಮಾಡಲಾಗುತ್ತದೆ.
ಸಾಲಗಾರನು ಟರ್ಮ್ ಪಾಲಿಸಿ ತೆಗೆದುಕೊಂಡಿದ್ದರೆ ವಿಮಾ ಪರಿಹಾರವು ಆತನ ನಾಮಿನಿ ಖಾತೆಗೆ ಜಮೆಯಾಗುತ್ತದೆ. ವಿಮಾ ಪರಿಹಾರವನ್ನು ಕಾನೂನಿನ ಪ್ರಕಾರ ನಾಮಿನಿಗಳಿಗೆ ಮಾತ್ರ ನೀಡಲಾಗುತ್ತದೆ. ಸಾಲಗಾರನು ಯಾವುದೇ ಸಾಲ ಮಾಡಿದ್ದರೂ ಸರಿ ವಿಮಾ ಪರಿಹಾರವು ಸಾಲ ನೀಡಿದ ಬ್ಯಾಂಕಿಗೆ ನೇರವಾಗಿ ಸಿಗುವುದಿಲ್ಲ.
ಅದೇನೇ ಆದರೂ ವಿಮಾ ಪರಿಹಾರವು ನಾಮಿನಿ ಖಾತೆಗೆ ಮಾತ್ರ ಜಮೆಯಾಗುತ್ತದೆ. ನಾಮಿನಿ ಬಯಸಿದರೆ ಸಾಲ ಮರುಪಾವತಿ ಮಾಡಬಹುದು ಅಥವಾ ಬಿಡಬಹುದು. ಇಂಥ ಸಂದರ್ಭದಲ್ಲಿ ಒಂದು ವೇಳೆ ಗೃಹಸಾಲ ವಿಮೆ ಇರದಿದ್ದರೆ ಸಹ- ಸಾಲಗಾರ, ಉತ್ತರಾಧಿಕಾರಿಗಳು ಅಥವಾ ಗ್ಯಾರಂಟಿ ನೀಡಿದವರಿಂದ ಸಾಲ ವಸೂಲಿ ಮಾಡಲಾಗುವುದಿಲ್ಲ. ಬದಲಾಗಿ ಮನೆಯನ್ನು ಜಪ್ತಿ ಮಾಡಿಕೊಂಡು ಹರಾಜು ಹಾಕಲಾಗುತ್ತದೆ. ಬಂದ ಹಣದಲ್ಲಿ ಬ್ಯಾಂಕು ಸಾಲ ಚುಕ್ತಾ ಮಾಡಿಕೊಂಡು ಉಳಿದ ಹಣವನ್ನು ನಾಮಿನಿಗೆ ಮರಳಿಸುತ್ತದೆ.
ಒಂದು ವೇಳೆ ಕಾರು ಸಾಲ ಪಡೆದ ವ್ಯಕ್ತಿಯೊಬ್ಬರಿಗೆ ಏನಾದರೂ ಆದರೆ ಮುಂದೇನು? ಇಂಥ ಸಂದರ್ಭದಲ್ಲಿ ಸಾಲ ನೀಡಿದ ಬ್ಯಾಂಕ್ ಸಾಲಗಾರನ ಕುಟುಂಬದವನ್ನು ಸಂಪರ್ಕಿಸುತ್ತದೆ. ಸಾಲಗಾರನಿಗೆ ಯಾರಾದರೂ ಉತ್ತರಾಧಿಕಾರಿ ಇದ್ದಲ್ಲಿ, ಅವರು ಕಾರನ್ನು ಇಟ್ಟುಕೊಂಡು ಸಾಲ ಮರುಪಾವತಿಸಲು ಸಿದ್ಧವಾಗಿದ್ದಾರಾ ಎಂದು ನೋಡುತ್ತದೆ.
ಒಂದು ವೇಳೆ ಅವರು ನಿರಾಕರಿಸಿದರೆ ಕಾರು ಮುಟ್ಟುಗೋಲು ಹಾಕಿಕೊಂಡು ಸಾಲ ಚುಕ್ತಾ ಮಾಡಲಾಗುತ್ತದೆ. ಪರ್ಸನಲ್ ಲೋನ್ ಮತ್ತು ಕ್ರೆಡಿಟ್ ಕಾರ್ಡ್ಗಳು ಯಾವುದೇ ಗ್ಯಾರಂಟಿಯನ್ನು ಹೊಂದಿರುವುದಿಲ್ಲ. ಇಂಥ ಸಾಲಗಳನ್ನು ಪಡೆದ ವ್ಯಕ್ತಿ ಒಂದೊಮ್ಮೆ ನಿಧನರಾದಲ್ಲಿ ಅವರ ಸಂಬಂಧಿಗಳು ಅಥವಾ ಉತ್ತರಾಧಿಕಾರಿಗಳಿಂದ ಈ ಸಾಲ ವಸೂಲಿ ಮಾಡಲು ಸಾಧ್ಯವಿಲ್ಲ.
ಒಂದು ವೇಳೆ ಸಹ-ಸಾಲಗಾರ ಇದಲ್ಲಿ ಅವರಿಂದ ಸಾಲ ವಸೂಲಿಗೆ ಬ್ಯಾಂಕ್ ಪ್ರಯತ್ನಿಸುತ್ತದೆ. ಸಹ-ಸಾಲಗಾರ ಇಲ್ಲದಿದ್ದರೆ ಅಂಥ ಸಾಲವನ್ನು ಇನ್ನಾವ ರೀತಿಯಿಂದಲೂ ವಸೂಲಿ ಮಾಡಲಾಗದು. ಅದನ್ನು ಅನುತ್ಪಾದಕ ಆಸ್ತಿ ಎಂದು ಬ್ಯಾಂಕ್ ಪರಿಗಣಿಸಬೇಕಾಗುತ್ತದೆ.
ವಾರಸುದಾರರು ಏನು ಮಾಡಬೇಕು?: ಬ್ಯಾಂಕ್ ಕಾನೂನು ಪ್ರಕಾರ ವಾರಸುದಾರರನ್ನು ಸಂಪರ್ಕಿಸಿದೆ ಮತ್ತು ತೆಗೆದುಕೊಂಡ ಸಾಲವನ್ನು ಪಾವತಿಸಲು ಅವರಿಗೆ ನೋಟಿಸ್ ನೀಡಿದೆ ಎಂದು ಭಾವಿಸೋಣ. ಅಂತಹ ಸಂದರ್ಭಗಳಲ್ಲಿ, ಉತ್ತರಾಧಿಕಾರಿಗಳು ಮೊದಲು ಹಣಕಾಸಿನ ಮೌಲ್ಯಮಾಪನವನ್ನು ಮಾಡಬೇಕು. ಒಟ್ಟು ಆಸ್ತಿಗಳ ಮೌಲ್ಯ ಮತ್ತು ಪಾವತಿಸಬೇಕಾದ ಬಾಕಿ ಮೊತ್ತವನ್ನು ಲೆಕ್ಕ ಹಾಕಿ, ಆಸ್ತಿಯ ಮೌಲ್ಯವು ಬಾಕಿಗಿಂತ ಹೆಚ್ಚಿದ್ದರೆ, ಸಾಲವನ್ನು ಪಾವತಿಸುವುದು ಉತ್ತಮ. ಕಡಿಮೆಯಾದರೆ ಆಸ್ತಿಯನ್ನು ಬ್ಯಾಂಕ್ ಗೆ ಹಸ್ತಾಂತರಿಸಿ ವಸೂಲಿ ಮಾಡುವಂತೆ ಕೋರಬಹುದು.
ಅಸುರಕ್ಷಿತ ಸಾಲಗಳ ಸಂದರ್ಭದಲ್ಲಿ ಬಡ್ಡಿದರಗಳು ಹೆಚ್ಚು. ಹೆಚ್ಚಿನ ಸಂದರ್ಭಗಳಲ್ಲಿ ಅಸುರಕ್ಷಿತ ಸಾಲಗಳ ವಿಚಾರದಲ್ಲಿ ಸಹ-ಸಾಲಗಾರನನ್ನು ಸೇರಿಸುವುದು ಬಡ್ಡಿದರವನ್ನು ಕಡಿಮೆ ಮಾಡುತ್ತದೆ. ಏಕೆಂದರೆ ಇದು ಬ್ಯಾಂಕಿನ ಅಪಾಯವನ್ನು ಬಹಳ ಮಟ್ಟಿಗೆ ಕಡಿಮೆ ಮಾಡುತ್ತದೆ. ಸಾಲಗಾರನು ಸಾಲಕ್ಕೆ ಸಾಕಷ್ಟು ವಿಮಾ ರಕ್ಷಣೆಯನ್ನು ತೆಗೆದುಕೊಳ್ಳುವುದು ಯಾವಾಗಲೂ ಉತ್ತಮ. ಇದು ಅನಿರೀಕ್ಷಿತ ಘಟನೆಯಲ್ಲಿ ಕುಟುಂಬ ಸದಸ್ಯರನ್ನು ಸಾಲದ ಹೊರೆಯಿಂದ ರಕ್ಷಿಸುತ್ತದೆ ಎಂದು ಬ್ಯಾಂಕ್‌ಬಜಾರ್‌ನ ಸಿಇಒ ಆದಿಲ್ ಶೆಟ್ಟಿ ಹೇಳುತ್ತಾರೆ.
ಇದನ್ನು ಓದಿ:ಪ್ರಿಂಟೌಟ್ ಬೇಕಿತ್ತಾ.. ಬ್ಲಿಂಕಿಟ್ ಮಾಡಿ, 10 ನಿಮಿಷದಲ್ಲಿ ಮನೆಗೇ ತರಿಸಿಕೊಳ್ಳಿ..