ಮುಂಬೈ: ಷೇರುಪೇಟೆಯಲ್ಲಿ ಕರಡಿ ಕುಣಿತ ಮುಂದುವರೆದಿದ್ದು, ದಿನದ ಆರಂಭದಲ್ಲೇ ಸೆನ್ಸೆಕ್ಸ್ ಬರೋಬ್ಬರಿ 1,400 ಅಂಕಗಳ ಪತನವಾಗಿದ್ದು, 58 ಸಾವಿರದ 410ರಲ್ಲಿ ವಹಿವಾಟು ನಡೆಸಿದೆ. ಇತ್ತ ನಿಫ್ಟಿ ಕೂಡ 400 ಅಂಕಗಳ ನಷ್ಟದೊಂದಿಗೆ 17 ಸಾವಿರದ 415ರಲ್ಲಿತ್ತು.
ಕಳೆದ ಒಂದು ತಿಂಗಳ ಹಿಂದೆ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿದ್ದ ಸೆನ್ಸೆಕ್ಸ್ ಕೆಲ ದಿನಗಳಿಂದ ನಿರಂತರವಾಗಿ ನಷ್ಟದಲ್ಲೇ ಸಾಗುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಏರಿಳಿತವೇ ಸೆನ್ಸೆಕ್ಸ್ ಭಾರಿ ನಷ್ಟಕ್ಕೆ ಕಾರಣ ಎಂದು ಷೇರುಪೇಟೆ ತಜ್ಞರು ವಿಶ್ಲೇಷಿಸಿದ್ದಾರೆ.
ಭಾರತಿ ಏರ್‌ಟೆಲ್ ಶೇ.4 ರಷ್ಟು ಲಾಭ ಗಳಿಸಿದ್ದನ್ನು ಹೊರತುಪಡಿಸಿದರೆ, ಏಷಿಯನ್ ಪೈಂಟ್ಸ್, ಪವರ್ ಗ್ರಿಡ್, ಬಜಾಜ್, ರಿಲಯನ್ಸ್, ಟೈಟಾನ್, ಎಸ್‌ಬಿಐ, ಮಾರುತಿ ಸೇರಿದಂತೆ ಬಹುತೇಕ ಕಂಪನಿಯ ಷೇರುಗಳು ಹೆಚ್ಚು ನಷ್ಟ ಅನುಭವಿಸಿವೆ. ಯೂರೋಪ್ ದೇಶಗಳಲ್ಲಿ ಹೊಸದಾಗಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವುದು, ಆಸ್ಟ್ರೇಲಿಯಾ ಸೇರಿದಂತೆ ಕೆಲ ರಾಷ್ಟ್ರಗಳಲ್ಲಿ ಲಾಕ್‌ಡೌನ್‌ನಂತರ ನಿರ್ಬಂಧಗಳು ಜಾಗತಿಕ ಮಾರುಕಟ್ಟೆಗೆ ಹೊಡೆತ ನೀಡಿವೆ. ಇದು ಮುಂಬೈ ಷೇರುಪೇಟೆ ಮೇಲೂ ಪರಿಣಾಮ ಬೀರಿದೆ.
ದಿನದಾಂತ್ಯಕ್ಕೆ ಸೆನ್ಸೆಕ್ಸ್ 1,170 ಅಂಕಗಳ ನಷ್ಟದೊಂದಿಗೆ 58,465 ಹಾಗೂ ನಿಫ್ಟಿ 348 ಅಂಕಗಳ ಪತನದೊಂದಿಗೆ 17,416ರಲ್ಲಿ ವಹಿವಾಟು ಅಂತ್ಯಗೊಳಿಸಿವೆ.
ಇದನ್ನೂ ಓದಿ: PAYTM.. ವ್ಯಾಪಾರ ಮೌಲ್ಯದಲ್ಲಿ ಎರಡು ಪಟ್ಟು ಹೆಚ್ಚು ಏರಿಕೆ: ಕಾರಣ?