ನವದೆಹಲಿ: ಉಕ್ರೇನ್-ರಷ್ಯಾ ನಡುವಿನ ಭೌಗೋಳಿಕ ಹಾಗೂ ರಾಜಕೀಯ ಉದ್ವಿಗ್ನತೆಯಿಂದ ತೀವ್ರವಾಗಿ ಏರಿಕೆ ಕಂಡಿದ್ದ ಅಮೂಲ್ಯ ಲೋಹಗಳು, ಕೈಗಾರಿಕಾ ಲೋಹ ಹಾಗೂ ಕಚ್ಚಾ ತೈಲದ ಬೆಲೆಗಳಲ್ಲಿ ಇಂದು ಗಣನೀಯವಾಗಿ ಇಳಿಕೆ ಕಂಡಿವೆ.
ಬ್ರೆಂಟ್ ಕಚ್ಚಾ ತೈಲ ಇಂದು ಪ್ರತಿ ಬ್ಯಾರೆಲ್‌ಗೆ 100 ಡಾಲರ್‌ಗಿಂತ ಕಡಿಮೆಯಾಗಿದೆ. ಪ್ರತಿ ಬ್ಯಾರಲ್ 94.85 ಡಾಲರ್‌ನಲ್ಲಿ ವಹಿವಾಟು ನಡೆಸಿದೆ. ನಿನ್ನೆ ಪ್ರತಿ ಬ್ಯಾರೆಲ್‌ಗೆ ಗರಿಷ್ಠ ಮಟ್ಟ 105.79 ಡಾಲರ್‌ಗೆ ಜಿಗಿದಿತ್ತು. ಇದು ಹಲವು ವರ್ಷಗಳ ಬಳಿಕ ಏರಿಕೆಯ ಗರಿಷ್ಠ ಮಟ್ಟವಾಗಿತ್ತು.
ಇನ್ನು ಕಾಮೆಕ್ಸ್ ಎಕ್ಸ್‌ಚೇಂಜ್‌ನಲ್ಲಿ ಚಿನ್ನದ ಬೆಲೆಗಳು ಶೇ.1.5 ರಷ್ಟು ಕುಸಿದು ಪ್ರತಿ ಔನ್ಸ್‌ಗೆ 1,895 ಡಾಲರ್‌ಗೆ ತಲುಪಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬೆಳ್ಳಿಯ ಬೆಲೆಯು ಪ್ರತಿ ಔನ್ಸ್‌ಗೆ ಶೇ.2ರಷ್ಟು ಕಡಿಮೆಯಾಗಿ 24.18 ಡಾಲರ್‌ಗಿಂತ ಕಡಿಮೆಯಾಗಿದೆ.
ಭಾರತದ ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಸುಮಾರು ಶೇ.2.5 ರಷ್ಟು ಕುಸಿತ ಕಂಡು ರೂಪಾಯಿಯಲ್ಲಿ ಕ್ರಮವಾಗಿ 1,200 ರೂ. ಹಾಗೂ 1,700 ರೂ. ಕಡಿಮೆಯಾಗಿದೆ.
ಚಿನ್ನದ ಬೆಲೆ ಇನ್ನೂ ಕಡಿಮೆಯಾಗುತ್ತೆ..?: ಅನಿಶ್ಚಿತತೆ ಕಡಿಮೆಯಾದ ನಂತರ ಚಿನ್ನದ ಬೆಲೆಗಳು ಹಿಂದಿನ ಸ್ಥಿತಿಗೆ ಬರುವುದನ್ನು ನಿರೀಕ್ಷಿಸಬಹುದು ಎಂದು ಕ್ವಾಂಟಮ್ ಎಎಂಸಿಯ ಪರ್ಯಾಯ ಹೂಡಿಕೆಗಳ ಹಿರಿಯ ನಿಧಿ ವ್ಯವಸ್ಥಾಪಕ ಚಿರಾಗ್ ಮೆಹ್ತಾ ಹೇಳಿದ್ದಾರೆ. ಈಗಾಗಲೇ ಹೂಡಿಕೆ ಮಾಡಿರುವ ಹೂಡಿಕೆದಾರರಿಗೆ ಹೊಸ ಹೂಡಿಕೆದಾರರು ಪ್ರಸ್ತುತ ಮಟ್ಟದಲ್ಲಿ ದೊಡ್ಡ ಪ್ರಮಾಣದ ಹೂಡಿಕೆ ತಪ್ಪಿಸಬೇಕು ಎಂದು ಮೆಹ್ತಾ ಸಲಹೆ ನೀಡಿದ್ದಾರೆ.
ಲೋಹ ವಲಯದಲ್ಲಿ ಶುಕ್ರವಾರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ಲಾಟಿನಂ, ಪಲ್ಲಾಡಿಯಂ, ಅಲ್ಯೂಮಿನಿಯಂ ಮತ್ತು ನಿಕಲ್ ಬೆಲೆಯಲ್ಲಿ ಇಳಿಕೆಯಾಗಿದೆ. ನಿಕಲ್, ತಾಮ್ರ, ಪಲ್ಲಾಡಿಯಮ್ ಮತ್ತು ತಾಮ್ರ ಬೆಲೆ ಏರಿಳಿತಕ್ಕೆ ರಷ್ಯಾ ಮತ್ತು ಉಕ್ರೇನ್ ಬೆಳವಣಿಗೆಗಳು ಪ್ರಮುಖ ಕಾರಣವಾಗಿವೆ.
ಇದನ್ನೂ ಓದಿ: ಚೇತರಿಕೆಯತ್ತ ಸೆನ್ಸೆಕ್ಸ್: ಆರಂಭಿಕ ವಹಿವಾಟಿನಲ್ಲಿ 1,329 ಅಂಕ ಏರಿಕೆ