ವಾಷಿಂಗ್ಟನ್: ಉಕ್ರೇನ್ - ರಷ್ಯಾ ನಡುವಿನ ಯುದ್ಧ 23ನೇ ದಿನಕ್ಕೆ ಕಾಲಿಟ್ಟಿದ್ದು, ವ್ಲಾಡಿಮಿರ್ ಪುಟಿನ್ ಸೇನೆಯ ದಾಳಿ ತೀವ್ರಗೊಳ್ಳುತ್ತಿದ್ದಂತೆ ಮತ್ತೆ ತೈಲ ಬೆಲೆ ಬ್ಯಾರೆಲ್‌ಗೆ 100ರ ಗಡಿ ದಾಟಿದೆ. ಇದರಿಂದಾಗಿ ಇಂಧನ ಪೂರೈಕೆಯ ಮೇಲೆ ಪರಿಣಾಮ ಬೀರಿದೆ.
ಯುದ್ಧ ಮುಂದುವರೆದಿರುವುದು ಇಂಧನ ಸರಬರಾಜಿಗೆ ಅಡ್ಡಿಪಡಿಸುತ್ತಿರುವುದಲ್ಲದೇ, ಇಂಧನ ಪೂರೈಕೆಯ ಮೇಲೆ ಪರಿಣಾಮ ಬೀರುವ ಬಗ್ಗೆ ಕಳವಳಗಳು ಹೆಚ್ಚುತ್ತಿರುವುದೇ ದರ ಏರಿಕೆಗೆ ಕಾರಣ ಎಂದು ವರದಿಗಳು ತಿಳಿಸಿವೆ. ಈ ವಾರದ ಆರಂಭದಲ್ಲಿ ಬ್ಯಾರೆಲ್‌ಗೆ 94 ಡಾಲರ್‌ಗಿಂತ ಕಡಿಮೆಯಾಗಿದ್ದ ಕಚ್ಚಾ ತೈಲ ಅಮೆರಿಕದ ಇತ್ತೀಚಿನ ವಹಿವಾಟಿನಲ್ಲಿ ಬ್ಯಾರೆಲ್‌ಗೆ ಶೇ.8ರಷ್ಟು ಏರಿಕೆ ಕಂಡು 102.65 ಡಾಲರ್‌ಗೆ ಏರಿದೆ. ಬ್ರೆಂಟ್ ಕಚ್ಚಾ ತೈಲವು ಬ್ಯಾರೆಲ್‌ಗೆ ಶೇ.9ರಷ್ಟು ಹೆಚ್ಚಳವಾಗಿ 107 ಡಾಲರ್‌ಗೆ ಏರಿಕೆ ಕಂಡಿದೆ.
ಸಂಭಾವ್ಯ ಕದನ ವಿರಾಮದ ಭರವಸೆಯಿಂದ ಇತ್ತೀಚೆಗೆ ತೈಲ ಬೆಲೆ ಇಳಿಕೆಯಾಗಿತ್ತು. ಯುದ್ಧವು ಹೆಚ್ಚು ಕಾಲ ಮುಂದುವರಿಯುವ ಜೊತಗೆ ರಷ್ಯಾದ ತೈಲ ಆಮದಿಗೆ ದೊಡ್ಡ ಅಪಾಯವಿದೆ ಎಂದು ಯುಎಸ್ ಮಾಧ್ಯಮ ವರದಿ ಉಲ್ಲೇಖಿಸಿದೆ. ಇತ್ತೀಚಿನ ದಿನಗಳಲ್ಲಿ ಪುಟಿನ್ ಅವರ ಕ್ರಮಗಳನ್ನು ಗಮನಿಸಿದರೆ, ನಾವು ನಮ್ಮ ಭರವಸೆ ಹೆಚ್ಚಿಸಬಾರದೆಂದು ಅಮೆರಿಕದ ಪ್ರಮುಖ ತೈಲ ವಿಶ್ಲೇಷಕ ಮ್ಯಾಟ್ ಸ್ಮಿತ್ ಹೇಳಿದ್ದಾರೆ.
ರಷ್ಯಾದ ತೈಲ ಉತ್ಪಾದನೆಯ ಶೇ.30 ರಷ್ಟು ಕಡಿಮೆ ಆಗಬಹುದು ಎಂದು ಇಂಟರ್ನ್ಯಾಷನಲ್ ಎನರ್ಜಿ ಏಜೆನ್ಸಿ ಬುಧವಾರ ಎಚ್ಚರಿಸಿದೆ. ಇದು ವಿಶ್ವ ಆರ್ಥಿಕತೆಯನ್ನು ಸಂಭಾವ್ಯ ಪೂರೈಕೆ ಬಿಕ್ಕಟ್ಟಿಗೆ ಒಡ್ಡುತ್ತದೆ. ಜಾಗತಿಕ ಮಾರುಕಟ್ಟೆಗಳಿಗೆ ರಷ್ಯಾದ ತೈಲ ರಫ್ತಿನ ಸಂಭಾವ್ಯ ನಷ್ಟದ ಪರಿಣಾಮಗಳನ್ನು ಕಡಿಮೆ ಮಾಡಲು ಸಾಧ್ಯವಿಲ್ಲ ಎಂದು ಐಇಎ ತನ್ನ ಮಾಸಿಕ ವರದಿಯಲ್ಲಿ ಹೇಳಿದೆ.
ಇದನ್ನೂ ಓದಿ: ಚೇತರಿಕೆ ಹಾದಿಯಲ್ಲಿ ಆರ್ಥಿಕತೆ: 2022ರ ಮಾರ್ಚ್ 16ರ ವರೆಗೆ ನೇರ ತೆರಿಗೆ ಸಂಗ್ರಹ 13.63 ಲಕ್ಷ ಕೋಟಿಗೆ ಏರಿಕೆ!