ನವದೆಹಲಿ: ಕೊರೊನಾ ವೈರಸ್ನಿಂದ ಉಂಟಾದ ಲಾಕ್ಡೌನ್ನಿಂದಾಗಿ ಜನರು ತಮಗೆ ಬೇಕಾದ ವಸ್ತುಗಳನ್ನು ಮಾರುಕಟ್ಟಗೆ ಹೋಗಿ ಪಡೆಯಲಾಗದೇ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳ ಮೇಲೆ ತೀವ್ರ ರೀತಿಯಲ್ಲಿ ಅವಲಂಬಿತರಾಗಿದ್ದಾರೆ. ನಿತ್ಯ ಲ್ಯಾಪ್‌ಟಾಪ್‌ಗಳಿಂದ ಹಿಡಿದು ಉಡುಪುಗಳವರೆಗೆ ಜನರು ಅಗತ್ಯವಿಲ್ಲದ ವಸ್ತುಗಳನ್ನೂ ಸಹ ಖರೀದಿ ಮಾಡಲು ಆನ್ಲೈನ್ ಶಾಪಿಂಗ್ ಮೊರೆ ಹೋಗುತ್ತಿದ್ದಾರೆ. ಆದರೆ, ಪ್ರಸ್ತುತ ದಿನಗಳಲ್ಲಿ ಮಾನವ ಸಂಪನ್ಮೂಲದ ಕೊರತೆ ಎದುರಿಸುತ್ತಿರುವ ಕಂಪನಿಗಳು ಡೆಲಿವರಿ ಕಾರ್ಯವನ್ನು ವಿಳಂಬಗೊಳಿಸುತ್ತಿವೆ.
ಮೂರನೇ ಹಂತದ ಲಾಕ್ಡೌನ್ ಘೋಷಣೆಯಾದ ನಂತರ ಇ-ಕಾಮರ್ಸ್ ಕ್ಷೇತ್ರಗಳಿಗೆ ಕಿತ್ತಲೆ ಹಾಗೂ ಹಸಿರು ವಲಯಗಳಲ್ಲಿ ವ್ಯಾಪಾರ ವ್ಯವಹಾರ ನಡೆಸಲು ಸರ್ಕಾರ ಅನುಮತಿ ನೀಡಿದೆ. ಕೊರೊನಾ ವೈರಸ್ ಸೋಂಕಿನ ಸಂಖ್ಯೆ ಅವಲಂಬಿಸಿ, ಪ್ರದೇಶಗಳನ್ನು ಕೆಂಪು, ಕಿತ್ತಳೆ ಮತ್ತು ಹಸಿರು ವಲಯಗಳಾಗಿ ವಿಂಗಡಿಸಲಾಗಿದೆ. ದೆಹಲಿ, ಮುಂಬೈ, ಬೆಂಗಳೂರು, ಪುಣೆ ಮತ್ತು ಹೈದರಾಬಾದ್‌ಗಳನ್ನು ಒಳಗೊಂಡಿರುವ ಕೆಂಪು ವಲಯಗಳಲ್ಲಿ ಕಿರಾಣಿ, ಔಷಧಗಳು ಮತ್ತು ಆರೋಗ್ಯ ಉತ್ಪನ್ನಗಳಂತಹ ಅಗತ್ಯ ವಸ್ತುಗಳನ್ನು ಮಾತ್ರ ರವಾನಿಸಬಹುದಾಗಿದೆ.
ಕೆಂಪು ವಲಯಕ್ಕಿಂತ ಹಸಿರು ವಲಯದಲ್ಲಿ ಹೆಚ್ಚಿನ ಸ್ವಾತಂತ್ರ್ಯ ನೀಡಿದ ಹಿನ್ನೆಲೆ, ಜನರು ತಮಗೆ ಬೇಕಾದ ವಸ್ತುಗಳನ್ನು ತರಿಸಿಕೊಳ್ಳಲು ಆನ್ಲೈನ್ ಮೂಲಕ ಆರ್ಡರ್ ಮಾಡತೊಡಗಿದ್ದಾರೆ.
ಅಮೆಜಾನ್ ಇಂಡಿಯಾ ಕಂಪನಿಯು ಕಿತ್ತಳೆ ಮತ್ತು ಹಸಿರು ವಲಯಗಳಲ್ಲಿ ತನ್ನ ವಹಿವಾಟು ಪುನರಾರಂಭಿಸಿದ ಮೊದಲ ದಿನದಲ್ಲಿಯೇ ವಿವಿಧ ರೀತಿಯ ಸ್ಮಾರ್ಟ್ ಸಾಧನಗಳು, ವಿದ್ಯುತ್ ಉಪಕರಣಗಳಿಗೆ ಸಂಬಂಧಿಸಿದ ಉತ್ಪನ್ನಗಳು, ಬಟ್ಟೆ ಮತ್ತು ಗೃಹ ಬಳಕೆಯ ವಸ್ತುಗಳಿಗೆ ತೀವ್ರ ಬೇಡಿಕೆ ಬಂದಿದೆ.
ಆನ್ಲೈನ್ ಮಾರುಕಟ್ಟಯಲ್ಲಿ ಈಗಾಗಲೇ ಉಡುಪುಗಳು, ಪಾದರಕ್ಷೆಗಳು, ನೋಟ್‌ಬುಕ್, ಪೆನ್ನುಗಳು ಮತ್ತು ಪವರ್ ಬ್ಯಾಂಕ್, ಫೋನ್ ಹಾಗೂ ಲ್ಯಾಪ್‌ಟಾಪ್ ಚಾರ್ಜರ್‌ಗಳಂತಹ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಗ್ರಾಹಕರ ಬುಕ್ ಮಾಡಿದ್ದು, ಈ ವಸ್ತುಗಳೆಲ್ಲವೂ ಗ್ರಾಹಕರ ಕೈ ಸೇರಲು ಒಂದಿಷ್ಟು ಕಾಲಾವಕಾಶ ಬೇಕಿದೆ ಎಂದು ಇ-ಕಾಮರ್ಸ್ ತಿಳಿಸಿದೆ.
ಹಸಿರು ಸೇರಿದಂತೆ ಎಲ್ಲ ವಲಯಗಳಲ್ಲಿಯೂ ಅಗತ್ಯ ವಸ್ತುಗಳ ಪೂರೈಕೆಗೆ ಮೊದಲು ಒತ್ತು ನೀಡುತ್ತಿದ್ದು, ತದನಂತರ ಇನ್ನಿತರ ವಸ್ತುಗಳ ಬಗ್ಗೆ ಗಮನ ಹರಿಸಲಾಗುವುದು ಎಂದು ಅಮೆಜಾನ್ ತಿಳಿಸಿದೆ.
ಅಮೆಜಾನ್ ಇಂಡಿಯಾ, ಫ್ಲಿಪ್‌ಕಾರ್ಟ್ ಮತ್ತು ಸ್ನ್ಯಾಪ್‌ಡೀಲ್‌ನಂತಹ ಮಾರುಕಟ್ಟೆಗಳ ಸ್ಥಳವನ್ನು ಅನುಸರಿಸುವ ಇ-ಕಾಮರ್ಸ್ ಕಂಪನಿಗಳಿಗೆ ಮಾನವ ಸಂಪನ್ಮೂಲದ ಕೊರತೆಯೊಂದಿಗೆ ಮತ್ತೊಂದು ಸವಾಲು ಎಂದರೆ, ಅವರ ಅನೇಕ ಗೋದಾಮುಗಳು ಹಾಗೂ ಕಾರ್ಖಾನೆಗಳು ಕೆಂಪು ವಲಯಗಳಲ್ಲಿಇವೆ.
ಆನ್ಲೈನ್ ಶಾಪಿಂಗ್ ಕಂಪನಿಗಳ ಕಚೇರಿ ಸೇರಿದಂತೆ ಗೋದಾಮು ಹಾಗೂ ವಿತರಕರ ಸಮಸ್ಯೆ ಹೆಚ್ಚಾಗಿದ್ದು, ಗ್ರಾಹಕರು ಈಗಾಗಲೇ ಬುಕ್ ಮಾಡಿರುವ ವಸ್ತುಗಳು ನಾಲ್ಕರಿಂದ ಐದು ದಿನ ತಡವಾಗಲಿದೆ ಎಂದು ಇ-ಕಾಮರ್ಸ್ ತಿಳಿಸಿದೆ.