ನವದೆಹಲಿ: ಕೋವಿಡ್‌ನಿಂದ ವಿಧಿಸಲಾಗಿದ್ದ ಲಾಕ್‌ಡೌನ್ ಸಡಿಲಿಕೆ ನಂತರ ಆರ್ಥಿಕತೆಯ ಬಹುತೇಕ ವಲಯಗಳು ಚೇತರಿಕೆಯತ್ತ ಮರಳುತ್ತಿವೆ. ಕೈಗಾರಿಕಾ ಉತ್ಪಾದನೆಯು ಜುಲೈನಲ್ಲಿ ಶೇ. 11.5 ರಷ್ಟು ಏರಿಕೆ ಕಂಡಿದೆ. ಪ್ರಮುಖವಾಗಿ ಉತ್ಪಾದನೆ, ಗಣಿಗಾರಿಕೆ ಹಾಗೂ ವಿದ್ಯುತ್ ವಲಯಗಳು ಉತ್ತಮ ಪ್ರಗತಿಯತ್ತ ಸಾಗುತ್ತಿವೆ ಎಂದು ರಾಷ್ಟ್ರೀಯ ಅಂಕಿಅಂಶ ಕಚೇರಿ (ಎನ್‌ಎಸ್‌ಒ) ತಿಳಿಸಿದೆ.
ಉತ್ಪಾದನಾ ವಲಯವು ಶೇ.77.63 ರಷ್ಟು (ಜುಲೈನಲ್ಲಿ ಶೇ.10.5) ಬೆಳವಣಿಗೆಯಾಗಿದೆ ಎಂದು ಕೈಗಾರಿಕಾ ಉತ್ಪಾದನೆಯ ಸೂಚ್ಯಂಕದ ದತ್ತಾಂಶಗಳನ್ನು ಬಿಡುಗಡೆ ಮಾಡಲಾಗಿದೆ. ಜುಲೈನಲ್ಲಿ ಗಣಿಗಾರಿಕೆ ವಲಯದ ಉತ್ಪಾದನೆಯು ಶೇ. 19.5 ರಷ್ಟು ಏರಿಕೆಯಾಗಿದ್ದು, ವಿದ್ಯುತ್ ಉತ್ಪಾದನೆಯು ಶೇಕಡಾ 11.1 ರಷ್ಟು ಹೆಚ್ಚಳವಾಗಿದೆ.
ಕೋವಿಡ್ ಲಾಕ್‌ಡೌನ್‌ನಿಂದಾಗಿ ಕಳೆದ ವರ್ಷ ಮಾರ್ಚ್‌ನಲ್ಲಿ ಕೈಗಾರಿಕಾ ಉತ್ಪಾದನೆಯು ಶೇಕಡಾ 18.7 ರಷ್ಟು ಕುಸಿದಿತ್ತು. 2020ರ ಆಗಸ್ಟ್‌ನಲ್ಲೂ ಚೇತರಿಕೆ ಕಂಡಿರಲಿಲ್ಲ. ಇದೀಗ ಆರ್ಥಿಕ ಚಟುವಟಿಕೆಗಳ ಪುನರಾರಂಭದೊಂದಿಗೆ, ಕಾರ್ಖಾನೆಯ ಉತ್ಪಾದನೆಯು 2020ರ ಸೆಪ್ಟೆಂಬರ್‌ನಲ್ಲಿ ಶೇ.1 ರಷ್ಟು ಹಾಗೂ ಅಕ್ಟೋಬರ್‌ನಲ್ಲಿ 4.5 ರಷ್ಟು ಬೆಳವಣಿಗೆಯಾಯಿತು. 2020ರ ನವೆಂಬರ್‌ನಲ್ಲಿ ಕಾರ್ಖಾನೆಯ ಉತ್ಪಾದನೆಯು ಶೇ.1.6 ರಷ್ಟು ಕುಸಿತದ ಬಳಿಕ 2020ರ ಡಿಸೆಂಬರ್‌ನಲ್ಲಿ ಶೇ. 2.2 ರಷ್ಟು ವೃದ್ಧಿಯಾಗಿತ್ತು. 2ನೇ ಅಲೆಯ ಕೋವಿಡ್ ನಿಯಂತ್ರಣಕ್ಕಾಗಿ ಹಲವು ರಾಜ್ಯಗಳು ನಿರ್ಬಂಧ ವಿಧಿಸಿದ್ದರಿಂದ ಆರ್ಥಿಕತೆಯ ಕುಸಿತಕ್ಕೆ ಕಾರಣವಾಗಿತ್ತು.
ಇದನ್ನೂ ಓದಿ: ಜೂನ್ 27 ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ ದಿನ : ಸುಸ್ಥಿರ ಅಭಿವೃದ್ಧಿಗೆ ಅಡಿಪಾಯದ ವಲಯ