ನವದೆಹಲಿ: ಪ್ರಸಕ್ತ ವರ್ಷದ ಅಕ್ಟೋಬರ್‌ವರೆಗೆ ಆರಂಭಿಕ ಸಾರ್ವಜನಿಕ ಕೊಡುಗೆ(IPO)ಗಳ ಮೂಲಕ 61 ಕಂಪನಿಗಳು ಒಟ್ಟು 52,759 ಕೋಟಿ ರೂ.ಗಳನ್ನು ಸಂಗ್ರಹಿಸಿವೆ. ಇದು ಕಳೆದ ಹಣಕಾಸು ವರ್ಷದಲ್ಲಿ ಈ ಮಾರ್ಗದ ಮೂಲಕ ಸಂಗ್ರಹಿಸಲಾದ ನಿಧಿಗಿಂತ ಹೆಚ್ಚಾಗಿದೆ ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ತಿಳಿಸಿದೆ.
ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಪ್ರಸಕ್ತ ಹಣಕಾಸು ವರ್ಷದ ಅಕ್ಟೋಬರ್‌ವರೆಗೆ ಮಾರುಕಟ್ಟೆಗೆ ಬಂದ 61 ಕಂಪನಿಗಳಲ್ಲಿ 34 ಘಟಕಗಳು ಸಣ್ಣ ಮತ್ತು ಮಧ್ಯಮ ಉದ್ಯಮಗಳಾಗಿವೆ. ಹೆಚ್ಚಿನ ಸಂಖ್ಯೆಯ ತಯಾರಿಕಾ ಹಾಗೂ ಸೇವಾ ವಲಯದ ಕಂಪನಿಗಳು ಪಟ್ಟಿಗೆ ಬರಲಿವೆ ಎಂದು ಮಾಹಿತಿ ನೀಡಿದರು.
ಐಪಿಒಗಳನ್ನು(ಆರಂಭಿಕ ಸಾರ್ವಜನಿಕ ಕೊಡುಗೆಗಳು) ಕಂಪನಿಗಳು ಈ ವರ್ಷ ನಿಯಮಿತವಾಗಿ ತರುತ್ತಿವೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಅಕ್ಟೋಬರ್‌ವರೆಗೆ ಸಂಗ್ರಹಿಸಲಾದ ಮೊತ್ತವು ಕಳೆದ ಹಣಕಾಸು ವರ್ಷದಲ್ಲಿ ಸಂಗ್ರಹಿಸಲಾದ ಮೊತ್ತವನ್ನು ಮೀರಿಸಿದೆ ಎಂದು ಅವರು ಹೇಳಿದರು.
ಕಳೆದ ಹಣಕಾಸು ವರ್ಷದಲ್ಲಿ 56 ಕಂಪನಿಗಳು ಐಪಿಒಗಳಿಂದ ರೂ. 31,060 ಕೋಟಿ ರೂ.ಗಳಿಸಿವೆ. ಅವುಗಳಲ್ಲಿ 27 ಸಣ್ಣ ಹಾಗೂ ಮಧ್ಯಮ ಉದ್ಯಮಗಳಾಗಿವೆ ಎಂದು ಸೆಬಿ ಡೇಟಾ ಉಲ್ಲೇಖಿಸಿ ವಿವರ ನೀಡಿದ್ದಾರೆ. 61 ಕಂಪನಿಗಳ ಪೈಕಿ 100 ಕೋಟಿಗಿಂತ ಕಡಿಮೆ ಇರುವ ಕಂಪನಿಗಳು 35 ಇವೆ.
ನಾಲ್ಕು ಕಂಪನಿಗಳು 100 ಕೋಟಿ ರೂ. ಹಾಗೂ 500 ಕೋಟಿ ರೂ.ಗಿಂತ ಕಡಿಮೆ ಇವೆ. 22 ಕಂಪನಿಗಳು 500 ಕೋಟಿ ರೂ. ಅಥವಾ ಅದಕ್ಕಿಂತ ಹೆಚ್ಚಿನ ವ್ಯವಹಾರದ ಸಂಸ್ಥೆಗಳಾಗಿವೆ. 61 ಕಂಪನಿಗಳಲ್ಲಿ 10 ಆರೋಗ್ಯ ಕ್ಷೇತ್ರದಿಂದ ಹಾಗೂ 6 ಸಿಮೆಂಟ್/ನಿರ್ಮಾಣದ ವಲಯದ್ದಾಗಿವೆ.
ಪೇಟಿಎಂ ಐಪಿಒ ಹೂಡಿಕೆದಾರರಿಗೆ ಸಮಸ್ಯೆ ಆಗಿದಿಯೇ ಎಂಬ ಪೂರಕ ಪ್ರಶ್ನೆಗೆ ನಕಾರಾತ್ಮಕವಾಗಿ ಉತ್ತರಿಸಿದ ಸಚಿವರು, ಮೊದಲನೆಯದಾಗಿ, ಒನ್97 ಕಮ್ಯುನಿಕೇಷನ್ಸ್‌ನ ಐಪಿಒ ಹೂಡಿಕೆದಾರರಿಗೆ ತೊಂದರೆ ಉಂಟುಮಾಡಿದೆ ಎಂಬ ಅನಿಸಿಕೆ ಇದೆ. ಆದರೆ ಅವರಿಗೆ ಯಾವುದೇ ಸಮಸ್ಯೆ ಉಂಟಾಗಿಲ್ಲ ಎಂದು ಸಚಿವರು ಹೇಳಿದರು.
ಇದನ್ನೂ ಓದಿ: ದೇಶದಲ್ಲಿ ರಾಷ್ಟ್ರೀಯ ಚಿಲ್ಲರೆ ವ್ಯಾಪಾರ ನೀತಿ ರಚಿಸುವ ಪ್ರಸ್ತಾಪವಿದೆ: ಸಂಸತ್ತಿಗೆ ಕೇಂದ್ರ ಸರ್ಕಾರ ಮಾಹಿತಿ