ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಹಣಕಾಸು ನೀತಿ ಪ್ರಕಟಿಸಿದ್ದು, ವಿವಿಧ ಬ್ಯಾಂಕ್ ದರಗಳಲ್ಲಿ ಯಾವುದೇ ಬದಲಾವಣೆ ಮಾಡದಿರಲು ನಿರ್ಧರಿಸಿದೆ.
ಕೋವಿಡ್ ಕಾರಣದಿಂದಾಗಿ ಉಂಟಾದ ನಗದು ಹರಿವು ಸುಲಭಗೊಳಿಸಲು ಈ ಕ್ರಮಗಳನ್ನು ತೆಗೆದುಕೊಳ್ಳಲು ಆರ್‌ಬಿಐ ಹಣಕಾಸು ನೀತಿ ಸಮಿತಿ ಸಭೆಯ ಸದಸ್ಯರು ತೀರ್ಮಾನ ತೆಗೆದುಕೊಂಡಿದ್ದಾರೆ.
ಆದರೆ ಅತ್ಯಂತ ಮುಖ್ಯವಾಗಿ, ಡಿಜಿಟಲ್ ಹಣ ವರ್ಗಾವಣೆ ವಿಚಾರದಲ್ಲಿ ಕೆಲವೊಂದು ಬದಲಾವಣೆಗಳನ್ನು ತರಲಾಗಿದೆ. IMPS (Immediate Payment Service) ಮೂಲಕ ಹಣ ವರ್ಗಾವಣೆಗೆ ಈವರೆಗೆ ಇದ್ದ ಮಿತಿಯನ್ನು 2 ಲಕ್ಷ ರೂಪಾಯಿಯಿಂದ 5 ಲಕ್ಷ ರೂಪಾಯಿಗೆ ಹೆಚ್ಚಿಸಲಾಗಿದೆ.
ಹೆಚ್ಚು ಹಣ ವರ್ಗಾವಣೆ ಮಾಡಲು ಗ್ರಾಹಕರಿಗೆ ಅನುಕೂಲವಾಗುವಂತೆ ಮಾಡಲು ಈ ಮಿತಿಯನ್ನು ಪರಿಷ್ಕರಿಸಲಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ ಮಾಹಿತಿ ನೀಡಿದರು.
ರೆಪೋ, ರಿವರ್ಸ್ ರೆಪೋ ದರಗಳು..
ಈಗ ಸದ್ಯಕ್ಕೆ ಆರ್‌ಬಿಐ ದೇಶದ ಬ್ಯಾಂಕ್ಗಳಿಗೆ ನೀಡುವ ಸಾಲಕ್ಕೆ ವಿಧಿಸುವ ಬಡ್ಡಿಯನ್ನು ರೆಪೋ ದರ (Repo Rate) ಎಂದು ಕರೆಯಲಿದ್ದು, ಅದರ ದರ ಶೇಕಡಾ 4ರಷ್ಟಿದೆ.
ಅಗತ್ಯವಿದ್ದಾಗ ದೇಶದ ಬ್ಯಾಂಕ್ಗಳಿಂದ ಆರ್‌ಬಿಐ ಸಾಲ ತೆಗೆದುಕೊಳ್ಳಲಿದ್ದು, ಆ ದರವನ್ನು ರಿವರ್ಸ್ ರೆಪೋ ದರ (Reverse Repo Rate) ಎಂದು ಕರೆಯಲಾಗುತ್ತದೆ. ಅದರ ದರ ಈಗ ಶೇಕಡಾ 3.35ರಷ್ಟಿದೆ.
ಈ ದರಗಳು ಸಾರ್ವಜನಿಕರಿಗೆ ಸಾಕಷ್ಟು ಅನುಕೂಲ ಮಾಡಿಕೊಡಲಿದೆ ಎಂದು ಗವರ್ನರ್ ಶಕ್ತಿಕಾಂತ ದಾಸ್ ಅಭಿಪ್ರಾಯಪಟ್ಟಿದ್ದು, ಇದು ಸತತ ಎಂಟನೇ ಬಾರಿಗೆ ಈ ದರಗಳಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ.
ಇದನ್ನೂ ಓದಿ: ವಾಹನ ಸವಾರರ ಜೇಬಿಗೆ ಕತ್ತರಿ: ಸತತ 4ನೇ ದಿನವೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ