ನವದೆಹಲಿ: ನಗರದಲ್ಲಿರುವ ನೀತಿ ಆಯೋಗಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದು, ಆರ್ಥಿಕ ತಜ್ಞರೊಂದಿಗೆ, ಹಣಕಾಸು ವ್ಯವಹಾರದ ಬಗ್ಗೆ ಹಾಗೂ ಆರ್ಥಿಕತೆಯ ಬೆಳವಣಿಗೆಯ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ಆರ್ಥಿಕ ಬೆಳವಣಿಗೆ ಬಗ್ಗೆ ನಡೆಯುವ ಚರ್ಚೆಯಲ್ಲಿ ಪ್ರಧಾನಿಯೊಂದಿಗೆ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಇನ್ನಿತರ ಮಂತ್ರಿಗಳು ಕೈ ಜೋಡಿಸಲಿದ್ದು, ನೀತಿ ಆಯೋಗದ ಉಪಾಧ್ಯಕ್ಷ ರಾಜಿವ್ ಕುಮಾರ್, ಮುಖ್ಯ ಕಾರ್ಯದರ್ಶಿ ಅಮಿತಾಬ್ ಕಾಂತ್ ಮತ್ತು ಇನ್ನಿತರ ಹಿರಿಯ ಅಧಿಕಾರಿಗಳು ಹಾಗೂ ಆರ್ಥಿಕ ಸಲಹಾ ಮಂಡಳಿಯ ಅಧ್ಯಕ್ಷ ಬಿಬೆಕ್ ಡೆಬ್ರೊಯ್ ಪಾಲ್ಗೊಳ್ಳಲಿ ದ್ದಾರೆ.
2020-21ರ ಬಜೆಟ್ ಮಂಡನೆಗೆ ಮುನ್ನ ಈ ಸಭೆ ಕರೆಯಲಾಗಿದ್ದು, ಈ ಸಭೆ ಅತ್ಯಂತ ಮಹತ್ವದ್ದಾಗಿದೆ. ಈ ಸಭೆಯಲ್ಲಿ ಮಂದಿನ ಬಜೆಟ್ ಬಗ್ಗೆ ಹೆಚ್ಚಿನ ಚರ್ಚೆನಡೆಯಲಿದ್ದು, ಆರ್ಥಿಕತೆಯ ವೇಗ ಹೆಚ್ಚಿಸುವ ನಿಟ್ಟಿನಲ್ಲಿ ಚರ್ಚೆ ನಡೆಯಲಿದೆ. ಆರ್ಥಿಕತೆ ಮೇಲೆತ್ತುವ ಹಾಗೂ ಆರ್ಥಿಕ ಕುಸಿತದ ಸುಳಿಯಿಂದ ದೇಶವನ್ನ ಹೊರಗೆ ತರುವ ಬಗ್ಗೆ ತಜ್ಞರ ಸಲಹೆಗಳನ್ನ ಪಡೆಯುವ ಸಾಧ್ಯತೆ ಇದೆ.
ಈಗಾಗಲೇ ಪ್ರಧಾನಿ ಮೋದಿ ಉನ್ನತ ಉದ್ಯಮಿಗಳನ್ನು ಸೋಮವಾರದಂದು ಭೇಟಿ ಮಾಡಿ ಆರ್ಥಿಕ ಬೆಳವಣಿಗೆಗೆ ಅವಶ್ಯವಿರುವ ಅಗತ್ಯತೆಗಳ ಬಗ್ಗೆ ಹಾಗೂ ಉದ್ಯೋಗ ರಚಿಸುವ ಬಗ್ಗೆ ಚರ್ಚೆ ನಡೆಸಿದ್ದು, ಅವರಿಂದ ಸಲಹೆಗಳನ್ನ ಪಡೆದುಕೊಂಡಿದ್ದಾರೆ. ಇನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು ಬಜೆಟ್ ಮಂಡನೆ ಮಾಡಲಿದ್ದಾರೆ.