ನವದೆಹಲಿ: ರಾಷ್ಟ್ರೀಯ ಮಾದರಿ ಸಮೀಕ್ಷಾ ಕಚೇರಿ (ಎನ್‌ಎಸ್‌ಎಸ್‌ಒ) ಪೂರ್ಣಗೊಳಿಸಿದ ಗ್ರಾಹಕ ಖರ್ಚು ಸಮೀಕ್ಷೆ- 2017-18ರ ಫಲಿತಾಂಶ ಸೇರಿದಂತೆ ಎಲ್ಲ ವಿಧದ ಸಮೀಕ್ಷೆ ಮತ್ತು ವರದಿಗಳ ದತ್ತಾಂಶವನ್ನು ಬಿಡುಗಡೆ ಮಾಡುವಂತೆ 200ಕ್ಕೂ ಹೆಚ್ಚು ಆರ್ಥಿಕ ಮತ್ತು ಶಿಕ್ಷಣ ತಜ್ಞರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಕೆಲವು ಮಾಧ್ಯಮಗಳಿಗೆ ವರದಿಗಳಲ್ಲಿ ಸೂರಿಕೆಯಾದ ಅಂಶಗಳು ದೊರೆತಿವೆ. ಈ ಬಗ್ಗೆ ವರದಿ ಸಹ ಪ್ರಕಟಗೊಂಡಿದೆ. 2017- 18ರ ಅವಧಿಯ ಗ್ರಾಹಕ ಖರ್ಚು ಸಮೀಕ್ಷೆಯ ಸರಾಸರಿ ಬಳಕೆಯಲ್ಲಿ ತೀವ್ರ ಕುಸಿತ ಕಂಡು ಬಂದಿದೆ. ಆರ್ಥಿಕತೆ ಕುಸಿಯುತ್ತಿದೆ ಎಂಬುದನ್ನು ಸಮೀಕ್ಷಾ ಫಲಿತಾಂಶಗಳು ಹೇಳುತ್ತಿವೆ. ಆದರೆ, ಇವುಗಳು ಬಿಡುಗಡೆ ಮಾಡಲಾಗುತ್ತಿಲ್ಲ ಎಂದು ಅವರು ಹೇಳಿಕೆ ನೀಡಿದ್ದಾರೆ.
ಬಳಕೆ ಕುರಿತ ಸಮೀಕ್ಷೆಗಳು ರಾಷ್ಟ್ರೀಯ ಖಾತೆಗಳಲ್ಲಿನ ಸ್ಥೂಲ ಆರ್ಥಿಕ ಅಂದಾಜುಗಳಿಗಿಂತ ಭಿನ್ನವಾದ ಫಲಿತಾಂಶಗಳನ್ನ ಹೊರಡುಸುತ್ತಿವೆ ಎಂಬುದನ್ನು ಗಮನಿಸಬೇಕು ಎಂದು ಅವರು ಹೇಳಿದ್ದಾರೆ.
ಪಾರದರ್ಶಕತೆ ಮತ್ತು ಹೊಣೆಗಾರಿಕೆಯ ಹಿತದೃಷ್ಟಿಯಿಂದ ಎಲ್ಲ ದತ್ತಾಂಶವನ್ನು ವಿಳಂಬ ಮಾಡದೇ ಹಾಗೂ ಫಲಿತಾಂಶಗಳಲ್ಲಿ ಏನೆಂಬುದನ್ನು ಲೆಕ್ಕಿಸದೇ ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.