ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಕಾರ್ಮಿಕ ಕಾನೂನು ಸುಧಾರಣೆಯ ನಿಟ್ಟಿನಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದ್ದು, 13 ಕಾರ್ಮಿಕ ಕಾನೂನುಗಳನ್ನು ವಿಲೀನಗೊಳಿಸುವ ವಿಧೇಯಕ ಮಂಡಿಸಿದೆ. ಇದಕ್ಕೆ ಪ್ರತಿ ಪಕ್ಷಗಳು ಅಪಸ್ವರ ಎತ್ತಿವೆ.
ಕಂಪನಿಗಳಿಗೆ ಬಹು ನೋಂದಣಿ ಪ್ರಕ್ರಿಯೆಯನ್ನು ತಪ್ಪಿಸಲು ಪ್ರಸ್ತಾವಿತ ಕಾರ್ಮಿಕ ಕಾನೂನುಗಳ ಸಹಾಯಕವಾಗಲಿದೆ. ಒಂದು ಪರವಾನಗಿ, ಒಂದು ನೋಂದಣಿ ಮತ್ತು ಒಂದು ರಿಟರ್ನ್ಸ್ ಸಲ್ಲಿಕೆಯಿಂದ ಕಂಪನಿಗಳಿಗೆ ಅನುಕೂಲವಾಗಲಿದೆ ಎಂಬ ಸ್ಪಷ್ಟನೆಯೊಂದಿಗೆ ಕೇಂದ್ರ ಸರ್ಕಾರ ವಿಧೇಯಕ ಮಂಡಿಸಿತು.
13 ಕೇಂದ್ರೀಯ ಕಾರ್ಮಿಕ ಕಾನೂನುಗಳನ್ನು ವಿಲೀನಗೊಳಿಸಿ ಉದ್ಯೋಗ, ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಸ್ಥಳದಲ್ಲಿನ ಪರಿಸ್ಥಿತಿ ಸಂಹಿತೆ ವಿಧೇಯಕ (ಒಎಸ್ಎಚ್ಡಬ್ಲ್ಯು) ಮತ್ತು 44 ಕಾನೂನುಗಳನ್ನು ವಿಲೀನಿಗೊಳಿಸಿ ರೂಪಿಸಿರುವ ವೇತನ ಸಂಹಿತೆ ವಿಧೇಯಕ- 2019 ಅನ್ನು ಲೋಕಸಭೆಯಲ್ಲಿ ಕಾರ್ಮಿಕ ಮತ್ತು ಉದ್ಯೋಗ ಸಚಿವ ಸಂತೋಷ್ ಕುಮಾರ್ ಗಂಗ್ವಾರ್ ಮಂಡಿಸಿದರು.
ಕಂಪನಿ ಸ್ಥಾಪನೆಗೆ ಪ್ರಸ್ತುತ 13 ಕಾನೂನುಗಳಿಂದ ಸುಮಾರು 10 ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಬೇಕಿದೆ. ಸುಲಭವಾಗಿ ಉದ್ಯಮ ಆರಂಭಿಸಿ (ಈಸಿ ಆಫ್ ಡುಯಿಂಗ್ ಬ್ಯುಸಿನೆಸ್) ಜಾಗತಿಕ ಶ್ರೇಣಿಯಲ್ಲಿ ಭಾರತ 77ನೇ ಸ್ಥಾನದಲ್ಲಿ ಇದನ್ನು ಇನ್ನಷ್ಟು ಉತ್ತಮ ಪಡಿಸಲು ಕೇಂದ್ರ ಸರ್ಕಾರ ಕಾರ್ಮಿಕ ಕಾನೂನಗಳ ವಿಲೀನಕ್ಕೆ ಮುಂದಾಗಿದೆ.
ಕಾರ್ಮಿಕರಿಗೆ ಸಂಬಂಧಿಸಿದ ನಿಯಮಗಳನ್ನು ಸರ್ಕಾರ ತನ್ನ ಇಚ್ಛೆಯಂತೆ ರೂಪಿಸುವಂತಿಲ್ಲ. ಪ್ರಸ್ತಾವಿತ ವಿಧೇಯಕಗಳು ಕಾರ್ಮಿಕ ಕಾನೂನುಗಳನ್ನು ದುರ್ಬಲಗೊಳಿಸಲಿದೆ. ಜೊತೆಗೆ ಲಕ್ಷಾಂತರ ಕಾರ್ಮಿಕರ ಭವಿಷ್ಯ ಇದರಲ್ಲಿ ಅಡಗಿದೆ. ಜಾರಿಗೂ ಮುನ್ನ ಸಂಸತ್ತಿನ ಸ್ಥಾಯಿ ಸಮಿತಿಗೆ ಒಪ್ಪಿಸುವಂತೆ ಪ್ರತಿಪಕ್ಷಗಳು ಕೇಂದ್ರ ಸರ್ಕಾರವನ್ನು ಆಗ್ರಹಿಸಿವೆ.