ಮುಂಬೈ: ಸಾಲ ಮರುಪಾವತಿಗೆ ಬೇಡಿಕೆ ಇರಿಸಿದ್ದ ಫೈನಾನ್ಸ್ ಕಂಪನಿ ಉದ್ಯೋಗಿಯ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಪ್ರಕರಣದ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್ನ ನಾಗ್ಪುರ ನ್ಯಾಯಪೀಠ, ಹಣಕಾಸು ಕಂಪನಿಯ ಉದ್ಯೋಗಿ ವಿರುದ್ಧದ ಎಫ್‌ಐಆರ್ ರದ್ದುಪಡಿಸಿದೆ.
ಸಾಲ ಮರುಪಾವತಿ ಮಾಡಿಕೊಳ್ಳುವುದು ನೌಕರನ ಕರ್ತವ್ಯದ ಒಂದು ಭಾಗವಾಗಿದೆ. ಜೀವನವನ್ನು ಕೊನೆಗೊಳಿಸಲು ಸಾಲಗಾರನನ್ನು ಪ್ರಚೋದಿಸಲಾಗಿದೆ ಎಂದು ಹೇಳಲು ಆಗುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ವಿನಯ್ ದೇಶಪಾಂಡೆ ಮತ್ತು ಅನಿಲ್ ಕಿಲೋರ್ ಅವರಿದ್ದ ನ್ಯಾಯಪೀಠ ಹೇಳಿದೆ.
ಸಾಲಗಾರ ಪ್ರಮೋದ್ ಚೌಹಾನ್, ಸಾಲದ ಕಿರುಕುಳಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಹಣಕಾಸು ಕಂಪನಿ ಉದ್ಯೋಗಿ ಹೆಸರನ್ನು ಡೆತ್ನೋಟ್ನಲ್ಲಿ ಉಲ್ಲೇಖಿಸಿದ್ದ. ಐಪಿಸಿ ಸೆಕ್ಷನ್ 306 (ಆತ್ಮಹತ್ಯೆಗೆ ಪ್ರಚೋದನೆ) ಸಂಬಂಧ ವಿಚಾರಣೆ ನಡೆಸಿದ ಕೋರ್ಟ್, ಚೌಹಾನ್ ಅವರಿಂದ ಬಾಕಿ ಹಣ ವಸೂಲಿ ಮಾಡಲು ತಮ್ಮ ಅಧಿಕೃತ ಕರ್ತವ್ಯ ನಿರ್ವಹಿಸಿದ್ದಾರೆ. ಇದನ್ನು ಆತ್ಮಹತ್ಯೆಗೆ ಪ್ರಚೋದನೆ ಎನ್ನಲು ಆಗುವುದಿಲ್ಲ ಎಂದು ಅಭಿಪ್ರಾಯಟ್ಟಿದೆ.
ಇದನ್ನೂ ಓದಿ: ತೆಲಂಗಾಣ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಹಿಮಾ ಕೊಹ್ಲಿ ಪ್ರಮಾಣ ಸ್ವೀಕಾರ
ಚೌಹಾನ್‌ನಿಂದ ಸಾಲದ ಮೊತ್ತ ಕೋರಿ ಐಪಿಸಿ ಸೆಕ್ಷನ್ 306ರ ಅಡಿಯಲ್ಲಿ ಪುಣೆಯ ವ್ಯಕ್ತಿಯೊಬ್ಬರ ವಿರುದ್ಧ ಮಹಾರಾಷ್ಟ್ರದ ವಾಶಿಮ್ ಜಿಲ್ಲೆಯಲ್ಲಿ ಪೊಲೀಸ್ ದೂರು ದಾಖಲಿಸಲಾಗಿತ್ತು. ಸಾಲ ಒಪ್ಪಂದದ ಮೂಲಕ ಹೊಸ ವಾಹನ ಖರೀದಿಸಲು ಚೌಹಾನ್ ಅವರು ಮಹೀಂದ್ರಾ ಮತ್ತು ಮಹೀಂದ್ರಾ ಫೈನಾನ್ಷಿಯಲ್ ಸರ್ವಿಸ್ ಲಿಮಿಟೆಡ್‌ನಿಂದ ಸಾಲ ತೆಗೆದುಕೊಂಡಿದ್ದಾರೆ ಎಂದು ಪ್ರಾಸಿಕ್ಯೂಷನ್ ಹೈಕೋರ್ಟ್‌ಗೆ ತಿಳಿಸಿದೆ.