ನವದೆಹಲಿ: ಭಾರತ 'ಸುಂಕದ ರಾಜ್ಯ'ವಲ್ಲ. ಕೃಷಿಯಂತಹ ನಿರ್ದಿಷ್ಟ ಕ್ಷೇತ್ರಗಳ ಹಿತಾಸಕ್ತಿ ರಕ್ಷಿಸಿಕೊಳ್ಳಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವ ಹಕ್ಕನ್ನು ಆ ದೇಶ ಹೊಂದಿದೆ ಎಂದು ಅಂತಾರಾಷ್ಟ್ರೀಯ ವ್ಯಾಪಾರ ತಜ್ಞರು ಭಾರತದ ಬೆಂಬಲಕ್ಕೆ ನಿಂತಿದ್ದಾರೆ.
ಭಾರತ, ಅಮೆರಿಕದ ಆಮದು ಸರಕುಗಳ ಮೇಲೆ ಅತ್ಯಧಿಕ ಸುಂಕ ವಿಧಿಸುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೂರುತ್ತಲೇ 'ಭಾರತ ಸುಂಕದ ರಾಜ್ಯ'ಎಂದು ಅಣುಕಿಸುತ್ತಿದ್ದರು. ಆದರೆ, ಅಂತಾರಾಷ್ಟ್ರೀಯ ಆರ್ಥಿಕ ತಜ್ಞರು ಭಾರತದ ಬೆನ್ನಿಗೆ ನಿಂತು, 'ಭಾರತ ಸುಂಕದ ರಾಜ್ಯವಲ್ಲ. WTOನ ನೀತಿಗಳಿಗೆ ಒಳಪಟ್ಟು ಅದು ವ್ಯಾಪಾರ- ವಹಿವಾಟು ನಡೆಸುತ್ತಿದೆ ಎಂದಿದ್ದಾರೆ.
ಜವಾಹರ ಲಾಲ್ ನೆಹರು ವಿವಿಯ ಅರ್ಥಶಾಸ್ತ್ರ ಪ್ರಾಧ್ಯಾಪಕ ಬಿಸ್ವಜಿತ್ ಧಾರ್ ಅವರು ಅಮೆರಿಕದ ಆರೋಪಗಳು ಸಂಪೂರ್ಣವಾಗಿ ಆಧಾರರಹಿತವಾಗಿವೆ ಎಂದು ತಳ್ಳಿಹಾಕಿದ್ದಾರೆ. ವಾಸ್ತವದಲ್ಲಿ ಅಮೆರಿಕದ ಆಮದು ಸುಂಕ ತಂಬಾಕು ಮೇಲೆ ಶೇ 350 ರಷ್ಟು ಹಾಗೂ ತೆಂಗಿನಕಾಯಿ ಮೇಲೆ ಶೇ 164 ರಷ್ಟಿದೆ. ಆದರೆ, ಅದು ಇನ್ನೊಂದು ರಾಷ್ಟ್ರದತ್ತ ಬೆರಳುಮಾಡಿ ತೋರಿಸುತ್ತಿದೆ ಎಂದು ಹೇಳಿದ್ದಾರೆ.