ನವದೆಹಲಿ: ಬ್ರಿಕ್ಸ್ ಹಣಕಾಸು ಮತ್ತು ಕೇಂದ್ರ ಬ್ಯಾಂಕ್ ನಿಯೋಗಗಳ ಮೊದಲ ಸಭೆಯನ್ನು ಭಾರತ ಬುಧವಾರ ಆಯೋಜಿಸಿತ್ತು ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಬ್ರೆಜಿಲ್, ರಷ್ಯಾ, ಭಾರತ ಮತ್ತು ಚೀನಾದ ಗುಂಪು ತನ್ನ 15ನೇ ವಾರ್ಷಿಕೋತ್ಸವ ಆಚರಿಸುತ್ತಿರುವ ಈ ಸಮಯದಲ್ಲಿ 2021ರ ಬ್ರಿಕ್ಸ್ ಅಧ್ಯಕ್ಷತೆಯನ್ನು ಭಾರತ ವಹಿಸಿಕೊಂಡಿದೆ.
'ಬ್ರಿಕ್ಸ್ 15: ಇಂಟ್ರಾ-ಬ್ರಿಕ್ಸ್ ಸಹಕಾರ' ಎಂಬ ವಿಷಯದಡಿ ಸಭೆಯ ಸಹ ಅಧ್ಯಕ್ಷತೆಯನ್ನು ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ತರುಣ್ ಬಜಾಜ್ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ ಡೆಪ್ಯುಟಿ ಗವರ್ನರ್ ಡಾ. ಮೈಕೆಲ್ ಪಾತ್ರಾ ವಹಿಸಿಕೊಂಡಿದ್ದರು.
ಇದನ್ನೂ ಓದಿ: ಪಿಎಂ ಕಿಸಾನ್ ಸ್ಕೀಮ್ಗೆ 2 ವರ್ಷ: 10.75 ಕೋಟಿ ರೈತರಿಗೆ 1.15 ಲಕ್ಷ ಕೋಟಿ ರೂ. ನೇರ ವರ್ಗಾವಣೆ
ಭಾರತವು ಆರ್ಥಿಕ ಸಹಕಾರ ಕಾರ್ಯಸೂಚಿಯ ಅಡಿಯಲ್ಲಿ ತನ್ನ ಆದ್ಯತೆಗಳನ್ನು ಹಂಚಿಕೊಂಡಿದೆ. ಜಾಗತಿಕ ಆರ್ಥಿಕ ದೃಷ್ಟಿಕೋನ ಮತ್ತು ಕೋವಿಡ್-19 ಸಾಂಕ್ರಾಮಿಕಕ್ಕೆ ಪ್ರತಿಕ್ರಿಯೆ, ಸಾಮಾಜಿಕ ಮೂಲಸೌಕರ್ಯ ಹಣಕಾಸು ಮತ್ತು ಡಿಜಿಟಲ್ ತಂತ್ರಜ್ಞಾನಗಳ ಬಳಕೆ, ಹೊಸ ಅಭಿವೃದ್ಧಿ ಬ್ಯಾಂಕ್ (ಎನ್‌ಡಿಬಿ) ಚಟುವಟಿಕೆಗಳು, ಎಸ್‌ಎಂಇಗಾಗಿ ಫಿನ್‌ಟೆಕ್ ಮತ್ತು ಆರ್ಥಿಕ ಸೇರ್ಪಡೆ, ಬ್ರಿಕ್ಸ್ ಅನಿಶ್ಚಿತ ರಿಸರ್ವ್ ಅರೇಂಜ್ಮೆಂಟ್ (ಸಿಆರ್ಎ) ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿತು.
ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಪ್ರಸಕ್ತ ವರ್ಷದ ದ್ವಿತೀಯಾರ್ಧದಲ್ಲಿ ಭಾರತಕ್ಕೆ ಭೇಟಿ ನೀಡಿ ದೆಹಲಿಯಲ್ಲಿ ನಡೆಯಲಿರುವ ಬ್ರಿಕ್ಸ್ ನಾಯಕರ ಸಭೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಿದೆ ಎಂದು ವರದಿಯಾಗಿದೆ.