ನವದೆಹಲಿ : ಪ್ರಧಾನಿ ಮೋದಿ ಸರ್ಕಾರ ಆದಾಯ ತೆರಿಗೆ ಕಾನೂನಿನಲ್ಲಿ ಯುಪಿಎ ಆಡಳಿತದ ಅವಧಿಯಲ್ಲಿನ ತಿದ್ದುಪಡಿಯಿಂದ ಉದ್ಭವಿಸಿದ್ದ ಕಠಿಣ ವ್ಯಾಜ್ಯಗಳನ್ನು ಅಂತ್ಯಗೊಳಿಸಲು ಮುಂದಾಗಿದೆ. ಆ ಮೂಲಕ ವಿದೇಶಿ ಸಂಸ್ಥೆಗಳಾದ ವೊಡಾಫೋನ್, ಹಾಗೂ ಕೈರ್ನ್ ಎನರ್ಜಿಯಂತಹ ಕಂಪನಿಗಳು ಮುಂದಿರಿಸಿದ್ದ ಪೂರ್ವಾನ್ವಯ ತೆರಿಗೆ ಬೇಡಿಕೆಗಳನ್ನು ಹಿಂಪಡೆಯಲು ಸರ್ಕಾರಕ್ಕೆ ಸಾಧ್ಯವಾಗಲಿದೆ.
ಹಿಂದಿನ ತಿದ್ದುಪಡಿಯಿಂದ ವೊಡಾಫೋನ್, ಕೈರ್ನ್ ಸಂಸ್ಥೆಗಳ ವ್ಯಾಜ್ಯಗಳಲ್ಲಿ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಮಂಡಳಿಗಳಲ್ಲಿ ಕೇಂದ್ರ ಸರ್ಕಾರಕ್ಕೆ ಹಿನ್ನಡೆ ಆಗಿತ್ತು.
ಪೂರ್ವಾನ್ವಯ ತೆರಿಗೆ ವ್ಯವಸ್ಥೆಯ ಸಮಸ್ಯೆ ಕೊನೆಗೊಳಿಸುವ ಉದ್ದೇಶದಿಂದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ತೆರಿಗೆ ಕಾನೂನುಗಳ (ತಿದ್ದುಪಡಿ) ಮಸೂದೆ-2021 ಅನ್ನು ಲೋಕಸಭೆಯಲ್ಲಿಂದು ಮಂಡಿಸಿದ್ದಾರೆ. ಇದು ವೊಡಾಫೋನ್ ಮತ್ತು ಕೈರ್ನ್ ಹಿಂದಿನ ತೆರಿಗೆ ಬೇಡಿಕೆಯನ್ನು ಕೊನೆಗೊಳಿಸಲು ಪರಿಣಾಮಕಾರಿಯಾಗಿ ಅನುವು ಮಾಡಿಕೊಡುತ್ತದೆ.
ಇದನ್ನೂ ಓದಿ: Vodafone- ideaಗೆ ಶಾಕ್; ಎನ್‌ಇಡಿ, ಎನ್‌ಇಸಿ ಸ್ಥಾನದಿಂದ ಕೆಳಗಿಳಿದ ಕುಮಾರ್ ಮಂಗಳಂ ಬಿರ್ಲಾ
ದೇಶದ ಆಸ್ತಿಗಳ ಪರೋಕ್ಷ ವರ್ಗಾವಣೆಗೆ 2012ರ ಕಾನೂನನ್ನು ಬಳಸಿಕೊಂಡು ತೆರಿಗೆ ವಿಧಿಸಿದ್ದನ್ನು ಹಿಂದಕ್ಕೆ ಪಡೆಯಲು ಈ ಮಸೂದೆ ಅನುಕೂಲ ಮಾಡಿಕೊಡಲಿದೆ. ಕಾಯ್ದೆ ಜಾರಿಗೆ ಬಂದರೆ ಕಂಪನಿಗಿಳಿಂದ ಈ ಹಿಂದೆ ಸಂಗ್ರಹಿಸಿದ್ದ ಹಣವನ್ನು ಹಿಂದಿರುಗಿಸುವುದಾಗಿ ಸರ್ಕಾರ ಹೇಳಿದೆ.
ಈ ಮಸೂದೆಯು ಆದಾಯ ತೆರಿಗೆ ಕಾಯ್ದೆ-1961ಕ್ಕೆ ತಿದ್ದುಪಡಿ ತರಲು ಪ್ರಸ್ತಾಪವಾಗಿದೆ. ಇದರಿಂದಾಗಿ 2012ರ ಮೇ 28ಕ್ಕೂ ಮೊದಲು ವಹಿವಾಟು ಕೈಗೊಂಡಿದ್ದರೆ ಭಾರತೀಯ ಆಸ್ತಿಗಳಿಗೆ ಯಾವುದೇ ಪರೋಕ್ಷ ವರ್ಗಾವಣೆ ತೆರಿಗೆ ಬೇಡಿಕೆಯನ್ನು ಹೆಚ್ಚಿಸಲಾಗುವುದಿಲ್ಲ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಅಂದಿನ ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಅವರು ಹಣಕಾಸು ಮಸೂದೆಗೆ 2012ರ ಮೇ 28 ರಂದು ರಾಷ್ಟ್ರಪತಿಗಳಿಂದ ಒಪ್ಪಿಗೆ ಪಡೆದಿದ್ದರು.