ನವದೆಹಲಿ: ಏಕಾಏಕಿಯಾಗಿ ಕೊರೊನಾ ವೈರಸ್ ಹಬ್ಬುತ್ತಿರುವುದರಿಂದ ಸಾಂಕ್ರಾಮಿಕ ರೋಗವನ್ನು ನಿಯಂತ್ರಣದಲ್ಲಿ ಇರಿಸುವ ಸ್ಯಾನಿಟೈಜರ್ ದರ ಏರಿಕೆಗೆ ಕೇಂದ್ರ ಸರ್ಕಾರ ಕಡಿವಾಣ ಹಾಕಿದೆ.
ಹ್ಯಾಂಡ್ ವಾಶ್ ಬಳಕೆಯ 200 ಎಂಎಲ್ ಸ್ಯಾನಿಟೈಜರ್ ಬಾಟಲಿಯನ್ನು ₹ 100 ಮಾತ್ರ ನಿಗದಿಪಡಿಸಬೇಕು. ಇದಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುವಂತಿಲ್ಲ. ಈ ನಿಯಮವು 2020ರ ಜೂನ್ 30ರ ವರೆಗೆ ಅನ್ವಯಿಸುತ್ತದೆ ಎಂದು ಆದೇಶಿಸಿದೆ.
ಇದರ ಜೊತೆಗೆ 2 ಪ್ಲೈ (ಸರ್ಜಿಕಲ್) ಮುಖವಾಡದ ಬೆಲೆಯನ್ನು 8 ರೂ. ಮತ್ತು 3 ಪ್ಲೈ (ಸರ್ಜಿಕಲ್) ಮುಖವಾಡ ಸಹ ಜೂನ್ 30ರವರೆಗೆ 10 ರೂ. ನಿಗದಿಪಡಿಸಲಾಗಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಫೇಸ್ ಮಾಸ್ಕ್ ಮತ್ತು ಹ್ಯಾಂಡ್ ಸ್ಯಾನಿಟೈಸರ್ ತಯಾರಿಕೆಯಲ್ಲಿ ಬಳಸುವ ಕಚ್ಚಾ ವಸ್ತುಗಳ ಬೆಲೆಯಲ್ಲಿನ ತೀವ್ರ ಏರಿಕೆಯನ್ನು ಆಧರಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪಾಸ್ವಾನ್ ಹೇಳಿದರು.
ಈ ತಿಂಗಳ ಆರಂಭದಲ್ಲಿ ಸ್ಯಾನಿಟೈಸರ್ ಹಾಗೂ ಮುಖಗವಸುಗಳನ್ನು ತಾತ್ಕಾಲಿಕವಾಗಿ ಅಗತ್ಯ ವಸ್ತುಗಳ ಪಟ್ಟಿಗೆ ಸೇರಿಸಿತ್ತು. ದರ ಏರಿಕೆಯನ್ನು ನಿಯಂತ್ರಿಸಲು ಈ ಕ್ರಮ ತೆಗೆದುಕೊಂಡಿತ್ತು.