ನವದೆಹಲಿ : ಪ್ರಸಕ್ತ ಹಣಕಾಸಿನ ಮೊದಲ ತ್ರೈಮಾಸಿಕದಲ್ಲಿ ವಿತ್ತೀಯ ಕೊರತೆಯು 6.62 ಲಕ್ಷ ಕೋಟಿ ರೂ. ಅಥವಾ ಬಜೆಟ್ ಅಂದಾಜಿತ ಶೇ. 83.2ಕ್ಕೆ ಏರಿದೆ.
ಮುಖ್ಯವಾಗಿ ಕೊರೊನಾ ವೈರಸ್ ಪ್ರೇರೇಪಿತ ಲಾಕ್‌ಡೌನ್ ಕಾರಣದಿಂದ ತೆರಿಗೆ ಸಂಗ್ರಹದ ಕಳಪೆ ಸಾಧನೆ ಕಂಡು ಬಂದಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಹಣಕಾಸಿನ ಕೊರತೆಯು ಬಜೆಟ್ ಅಂದಾಜಿತ 61.4 ಪ್ರತಿಶತದಷ್ಟಿತ್ತು.
ಫೆಬ್ರವರಿಯಲ್ಲಿ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್ನಲ್ಲಿ 2020-21ರ ಹಣಕಾಸಿನ ಕೊರತೆಯನ್ನು 7.96 ಲಕ್ಷ ಕೋಟಿ ರೂ. ಅಥವಾ ಜಿಡಿಪಿಯ ಶೇ.3.5ರಷ್ಟು ನಿಗದಿಪಡಿಸಿದ್ದರು.
ಕೋವಿಡ್-19 ಬಿಕ್ಕಟ್ಟಿನಿಂದಾಗಿ ಆರ್ಥಿಕತೆಗೆ ಅಡೆತಡೆಗಳು ಸಂಭವಿಸಿದವು. ಕಂಟ್ರೋಲರ್ ಜನರಲ್ ಆಫ್ ಅಕೌಂಟ್ಸ್ (ಸಿಜಿಎ) ದತ್ತಾಂಶದ ಪ್ರಕಾರ, ಹಣಕಾಸಿನ ಕೊರತೆಯು ಜೂನ್ ಅಂತ್ಯದ ವೇಳೆಗೆ 6,62,363 ಕೋಟಿ ರೂ.ನಷ್ಟಾಗಿದೆ.
ಹಣಕಾಸಿನ ಕೊರತೆಯು 2019-20ರಲ್ಲಿ ಏಳು ವರ್ಷಗಳ ಗರಿಷ್ಠ, ಜಿಡಿಪಿಯ ಶೇ 4.6ಕ್ಕೆ ಏರಿತ್ತು. ಮಾರ್ಚ್ ಅಂತ್ಯದ ಲಾಕ್ಡೌನ್ನಿಂದ ಆದಾಯದಲ್ಲಿ ಕಳಪೆ ಪ್ರದರ್ಶನ ಕಂಡು ಬಂದಿದೆ. ಸಿಜಿಎ ಪ್ರಕಾರ, ಸರ್ಕಾರದ ಆದಾಯದ ಸ್ವೀಕೃತಿ 1,50,008 ಕೋಟಿ ರೂ. ಅಥವಾ ಬಜೆಟ್ ಅಂದಾಜಿನ (ಬಿಇ) ಶೇ.7.4ರಷ್ಟಿದೆ. ಕಳೆದ ಹಣಕಾಸು ವರ್ಷದ ಇದೇ ಅವಧಿಯಲ್ಲಿ, ಆದಾಯವು ಬಿಇಯ ಶೇ.14.5ರಷ್ಟಿತ್ತು.
ತೆರಿಗೆಯ ಆದಾಯವು ಈ ಹಣಕಾಸು ವರ್ಷದ ಮೊದಲ ಮೂರು ತಿಂಗಳಲ್ಲಿ 1,34,822 ಕೋಟಿ ರೂ. ಅಥವಾ ಬಿಇ ಶೇ.8.2ರಷ್ಟಿದೆ. ಕಳೆದ ಹಣಕಾಸಿನ ವರ್ಷದ ಮೊದಲ ತ್ರೈಮಾಸಿಕದಲ್ಲಿ, ತೆರಿಗೆ ಆದಾಯವು ಬಿಇಯ ಶೇ.15.2ರಷ್ಟಿತ್ತು. ಸರ್ಕಾರದ ಒಟ್ಟು ಸ್ವೀಕೃತಿ ಬಿಇಯ ಶೇ.6.8ರಷ್ಟು ಅಥವಾ 1,53,581 ಕೋಟಿ ರೂ.ಗಳಾಗಿದೆ. ಬಜೆಟ್ನಲ್ಲಿ ಸರ್ಕಾರವು 22.45 ಲಕ್ಷ ಕೋಟಿ ರೂ. ಎಂದು ಅಂದಾಜು ಮಾಡಿತ್ತು.
ಜೂನ್ ಅಂತ್ಯದ ವೇಳೆಗೆ ಸರ್ಕಾರದ ಒಟ್ಟು ಖರ್ಚು 8,15,944 ಲಕ್ಷ ಕೋಟಿ ರೂ. ಅಥವಾ ಬಿಇಯ ಶೇ26.8ರಷ್ಟಿದೆ. ಕಳೆದ ವಿತ್ತೀಯ ವರ್ಷದ ಇದೇ ಅವಧಿಯಲ್ಲಿ ಒಟ್ಟು ಖರ್ಚು ಬಿಇಯ ಶೇ.25.9ರಷ್ಟಿತ್ತು. ಜೂನ್‌ವರೆಗೆ ಕೇಂದ್ರ ಸರ್ಕಾರವು ತೆರಿಗೆ ಹಂಚಿಕೆಯಾಗಿ 1,34,043 ಕೋಟಿ ರೂ. ರಾಜ್ಯ ಸರ್ಕಾರಗಳಿಗೆ ವರ್ಗಾಯಿಸಲಾಗಿದೆ. ಇದು ಹಿಂದಿನ ವರ್ಷಕ್ಕಿಂತ 14,588 ಕೋಟಿ ರೂ.ಯಷ್ಟಿದೆ.
ಹಣಕಾಸು ಕೊರತೆ ಎಂದರೇನು? : ಸರ್ಕಾರದ ಒಟ್ಟು ಖರ್ಚು ಮತ್ತು ಅದರ ಆದಾಯದ ನಡುವಿನ ವ್ಯತ್ಯಾಸವೇ ಹಣಕಾಸು ಕೊರತೆ ಅಥವಾ ವಿತ್ತೀಯ ಕೊರತೆ ಅಥವಾ ನಗದು ಅಭಾವ ಎನ್ನುತ್ತಾರೆ. ಈ ಆದಾಯದಲ್ಲಿ ಸಾಲ ಪಡೆದ ಹಣ ಸೇರಿಸುವುದಿಲ್ಲ.
ಹಣಕಾಸಿನ ಕೊರತೆ ಹೆಚ್ಚಾದರೆ ಏನಾಗುತ್ತದೆ?: ಹಣಕಾಸಿನ ಕೊರತೆ ಹೆಚ್ಚಾದರೆ, ಸರ್ಕಾರವು ಸಾಲ ಮಾಡಬೇಕಾಗುತ್ತದೆ ಅಥವಾ ಹೆಚ್ಚು ಹಣವನ್ನು ಮುದ್ರಿಸಬೇಕಾಗುತ್ತದೆ. ಹಣ ಟಂಕಿಸಲು ಆರ್ಬಿಐಗೆ ಕೋರಿಕೊಳ್ಳಬೇಕಾಗುತ್ತೆ. ಹಣ ಮುದ್ರಿಸುವುದರಿಂದ ಸಾಕಷ್ಟು ಅಡ್ಡ ಪರಿಣಾಮಗಳು ಆರ್ಥಿಕತೆಯ ಮೇಲೆ ಬೀರುತ್ತವೆ. ಇದು ಹಣದುಬ್ಬರಕ್ಕೆ ಕಾರಣವಾಗುತ್ತದೆ. ಬಡ್ಡಿದರ ಏರಿಕೆಗೆ ಕಾರಣವಾಗುತ್ತದೆ. ಇಂತಹ ಅಪಾಯವನ್ನು ತೆಗೆದುಕೊಳ್ಳುವ ಗೋಜಿಗೆ ಯಾವುದೇ ಸರ್ಕಾರ ಹೋಗುವುದಿಲ್ಲ. ಇದರ ಬದಲಿಗೆ ಮಾರುಕಟ್ಟೆಯಲ್ಲಿ ಸಾಲ ತೆಗೆದುಕೊಳ್ಳುತ್ತೇವೆ.