ಮುಂಬೈ: ಯೆಸ್ ಬ್ಯಾಂಕ್ ಹಣಕಾಸು ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ಇಡಿ) ಸಮನ್ಸ್ ಪಡೆದಿದ್ದ ರಿಲಯನ್ಸ್ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿ ಇಂದು ಮುಂಬೈನಲ್ಲಿ ಇಡಿ ವಿಚಾರಣೆಗೆ ಹಾಜರಾದರು.
ಅನಿಲ್ ಅಂಬಾನಿ ಅವರನ್ನು ಇಡಿ ಅಧಿಕಾರಿಗಳು ಸುಮಾರು ಒಂಬತ್ತು 9 ಗಂಟೆಗಳ ಕಾಲ ಮ್ಯಾರಥಾನ್ ವಿಚಾರಣೆ ನಡೆಸಿದರು. ಹಣ ವರ್ಗಾವಣೆ ತಡೆ ಕಾಯ್ದೆಯಡಿ ಅಂಬಾನಿಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಅಂಬಾನಿ ಅವರು ಬೆಳಗ್ಗೆ 9. 30ರ ವೇಳೆಗೆ ಬಲ್ಲಾರ್ಡ್ ಎಸ್ಟೇಟ್‌ನಲ್ಲಿರುವ ಇಡಿ ಕಚೇರಿಗೆ ಆಗಮಿಸಿದರು. ಸಂಜೆ 7 ಗಂಟೆಗೆ ಅವರನ್ನು ಕಚೇರಿಯಿಂದ ಹೊರ ಕಳಿಸಿದರು.
ವಿಚಾರಣೆಯಲ್ಲಿ ಅಂಬಾನಿ ಅವರ ಉತ್ತರಗಳಿಗೆ ತೃಪ್ತಿಯಾಗದ ಅಧಿಕಾರಿಗಳು ಮಾರ್ಚ್ 30ರಂದು ಮತ್ತೆ ವಿಚಾರಣೆಗೆ ಬರುವಂತೆ ಸೂಚಿಸಿದ್ದಾರೆ. ಅನಿಲ್ ಅಂಬಾನಿ ಅವರ ಕಂಪನಿಗಳ ಸಮೂಹ ಯೆಸ್ ಬ್ಯಾಂಕ್ನಿಂದ ಸುಮಾರು 12,800 ಕೋಟಿ ರೂ.ಯಷ್ಟು ಸಾಲ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.