ಕೊರೊನಾ ವೈರಸ್ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ ವಿಧಿಸಲಾಗಿರುವ ಲಾಕ್ಡೌನ್ನಿಂದ ನಗರವಾಸಿಗಳೇ ಹೆಚ್ಚು ಬಾಧಿತರಾಗಲಿದ್ದಾರೆ ಎಂಬ ಅಂಶ ಸಮೀಕ್ಷೆಯಲ್ಲಿ ಬೆಳಕಿಗೆ ಬಂದಿದೆ.
ಕೊರೊನಾ ವೈರಸ್ನಿಂದ ನಮ್ಮ ಉದ್ಯಮ ಹಾಗೂ ಮಾರಾಟ ಪ್ರಕ್ರಿಯೆಯ ಮೇಲೆ ಭಾರಿ ಅಥವಾ ಮಧ್ಯಮ ಪ್ರಮಾಣದ ಹೊಡೆತ ಬೀಳುತ್ತಿದೆ ಎಂದು ಪ್ರತಿ 10 ನಗರಗವಾಸಿ ವೃತ್ತಿಪರರ ಪೈಕಿ 8 ಜನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಯೂಗೌ (YouGov) ಎಂಬ ಇಂಟರನೆಟ್ ಆಧರಿತ ಮಾರುಕಟ್ಟೆ ರಿಸರ್ಚ್ ಸಂಸ್ಥೆ ಕೈಗೊಂಡ ಸಮೀಕ್ಷೆಯಲ್ಲಿ ಲಾಕ್ಡೌನ್ ಪರಿಣಾಮಗಳ ಬಗ್ಗೆ ಹಲವಾರು ಅಂಶಗಳು ಬೆಳಕಿಗೆ ಬಂದಿವೆ. ಈ ಸಂಸ್ಥೆಯು 251 ಹಿರಿಯ ಉದ್ಯಮಿ, ವೃತ್ತಿಪರರನ್ನು ಸಂದರ್ಶಿಸಿ ಸಮೀಕ್ಷಾ ವರದಿ ನೀಡಿದೆ.
ಸಮೀಕ್ಷೆಯ ಪ್ರಕಾರ 1944 ರಿಂದ 1964 ರ ಅವಧಿಯಲ್ಲಿ ಹುಟ್ಟಿದ, ಈಗ ಉದ್ಯಮಿಗಳಾಗಿರುವ ಅಥವಾ ಕೆಲಸದಲ್ಲಿರುವವರ ಮೇಲೆ ಈ ಲಾಕ್ಡೌನ್ ಅತಿ ಹೆಚ್ಚು ಪ್ರತಿಕೂಲ ಪರಿಣಾಮ ಬೀರಲಿದೆ. ಸಮೀಕ್ಷೆಯಲ್ಲಿ ಪಾಲ್ಗೊಂಡ 251 ಜನರ ಪೈಕಿ ಕೇವಲ ಶೇ.7 ರಷ್ಟು ಜನ ಮಾತ್ರ ನಮಗೆ ಲಾಕ್ಡೌನ್ನಿಂದ ಅಂಥ ಪರಿಣಾಮವೇನೂ ಆಗದು ಎಂದಿದ್ದಾರೆ.
ಪೂರ್ವನಿಗದಿತ ವ್ಯವಹಾರ ಸಂಬಂಧಿ ಪ್ರಯಾಣ, ಮೀಟಿಂಗ್ ರದ್ದಾಗಿರುವುದರಿಂದ ಮಾರಾಟದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ ಎಂದು ಶೇ.58 ರಷ್ಟು ಜನ ಹೇಳಿದ್ದಾರೆ.
ತಮ್ಮ ಕಂಪನಿಗಳಲ್ಲಿ ಇನ್ನು ಮುಂದೆ ಶುಚಿತ್ವಕ್ಕೆ ಹೆಚ್ಚು ಒತ್ತು ನೀಡುವ ಕ್ರಮ ಕೈಗೊಳ್ಳಲಾಗಿದೆ ಎಂದು ಶೇ.55 ರಷ್ಟು ಹಾಗೂ ಉದ್ಯೋಗಿಗಳ ಸುರಕ್ಷತೆಗೆ ಹೆಚ್ಚು ನೀಡುವ ಕ್ರಮ ಕೈಗೊಂಡಿರುವುದಾಗಿ ಶೇ.53 ರಷ್ಟು ಜನ ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ಕೊರೊನಾ ವೈರಸ್ ನಮ್ಮ ವ್ಯವಹಾರದ ಮೇಲೆ ಬಹಳ ಅಥವಾ ಮಧ್ಯಮ ಪ್ರಮಾಣದ ಪರಿಣಾಮ ಬೀರಲಿದೆ ಎಂದು ಸಮೀಕ್ಷೆಯಲ್ಲಿ ಪಾಲ್ಗೊಂಡ 5 ರಲ್ಲಿ 4 ಜನ (ಶೇ.82) ಅಭಿಪ್ರಾಯ ಪಟ್ಟಿದ್ದಾರೆ. ತಮ್ಮ ವ್ಯಾಪಾರ ವಹಿವಾಟು ಬರುವ ದಿನಗಳಲ್ಲಿ ಹೆಚ್ಚಾಗಲಿವೆ ಎಂದು ಶೇ.10 ರಷ್ಟು ಜನ ಹೇಳಿಕೊಂಡಿದ್ದಾರೆ.