ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷೀಯ ಚುನಾವಣೆ ಅಭ್ಯರ್ಥಿ ಡೆಮಾಕ್ರಟಿಕ್ ಪಕ್ಷದ ತುಳಸಿ ಗಬ್ಬಾರ್ಡ್ ಅವರು ಸರ್ಚ್ ಎಂಜಿನ್ ದೈತ್ಯ ಗೂಗಲ್ ವಿರುದ್ಧ ದಾವೆ ಹೂಡಿ ₹ 344 ಕೋಟಿ ( 5 ಕೋಟಿ ಡಾಲರ್) ಪರಿಹಾರ ಕೋರಿದ್ದಾರೆ.
ಮುಂದಿನ ವರ್ಷ ಎದುರಾಗಲಿರುವ ಚುನಾವಣೆಯ ಹಿನ್ನೆಲೆಯಲ್ಲಿ ನಾನು ಕೈಗೊಂಡ ಪ್ರಚಾರದ ಪ್ರಸಾರಕ್ಕೆ ಸಂಬಂಧಿಸಿದಂತೆ ಗೂಗಲ್ ತಾರತಮ್ಯ ನೀತಿ ಧೋರಣೆ ತಳೆಯುತ್ತಿದೆ. ನನ್ನ ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕಲು ಯತ್ನಿಸುತ್ತಿದೆ ಎಂದು ದೂರಿನಲ್ಲಿ ತುಳಸಿ ಆರೋಪಿಸಿದ್ದಾರೆ.
ಚುನಾವಣೆಯ ಪ್ರಚಾರ ಕಾರ್ಯ ಪ್ರಸಾರ ಮಾಡಲು ಗೂಗಲ್ನಲ್ಲಿ ಜಾಹೀರಾತು ಖಾತೆ ಹೊಂದಿದ್ದೇನೆ. ಜೂನ್ನಲ್ಲಿ ನನ್ನ ಮೊದಲ ಸಂವಾದ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದ ಪ್ರಸಾರವನ್ನು ಸಂಸ್ಥೆ ಕೆಲ ಕಾಲ ಸ್ಥಗಿತಗೊಳಿಸಿತು. ಇದರಿಂದ ನನ್ನ ವಾಕ್ ಸ್ವಾತಂತ್ರ್ಯವನ್ನು ಕಸಿದುಕೊಂಡಂತಾಗಿದೆ ಎಂದು ದೂರಿದ್ದಾರೆ. ತುಳಸಿಯ ಖಾತೆಯನ್ನು ಏಕೆ ಅಮಾನತುಗೊಳಿಸಲಾಗಿದೆ ಎಂದು ಗೂಗಲ್ ಈವರೆಗೂ ಯಾವುದೇ ಸ್ಪಷ್ಟನೆ ಹಾಗೂ ಪ್ರತಿಕ್ರಿಯೆ ಸಹ ನೀಡಿಲ್ಲ.