ಮುಂಬೈ: ಟಾಟಾ ಮೋಟಾರ್ಸ್‌ನ ಎಲೆಕ್ಟ್ರಿಕ್ ವೆಹಿಕಲ್ಸ್ ವಿಭಾಗದ ಮಾರಾಟ, ಮಾರುಕಟ್ಟೆ ಮತ್ತು ಗ್ರಾಹಕ ಆರೈಕೆ ವಿಭಾಗದ ಮುಖ್ಯಸ್ಥ ಆಶೇಶ್ ಧರ್ ಹೃದಯ ಸ್ತಂಭನದಿಂದ ಮೃತಪಟ್ಟಿದ್ದಾರೆ.
ಧರ್ ಅವರು ಎರಡು ವರ್ಷಗಳ ಹಿಂದೆ ಇವಿ ವಿಭಾಗದ ಮಾರಾಟ, ಮಾರ್ಕೆಟಿಂಗ್ ಮತ್ತು ಗ್ರಾಹಕ ಆರೈಕೆಯ ಮುಖ್ಯಸ್ಥರಾಗಿದ್ದರು. 2011ರಲ್ಲಿ ಟಾಟಾ ಮೋಟಾರ್ಸ್‌ಗೆ ಸೇರಿದ ನಂತರ ಉನ್ನತ ಹುದ್ದೆಯಲ್ಲಿ ಬಡ್ತಿ ಪಡೆದಿದ್ದರು.
ಟಾಟಾ ಮೋಟಾರ್ಸ್‌ನಲ್ಲಿ ಕೆಲಸ ಮಾಡುವ ಮೊದಲು ಮಹೀಂದ್ರಾ ಫಸ್ಟ್ ಚಾಯ್ಸ್ ವ್ಹೀಲ್ಸ್ ಲಿಮಿಟೆಡ್‌ನಲ್ಲಿ ಕಾರ್ಯಾಚರಣೆ ವಿಭಾಗದ ಉಪಾಧ್ಯಕ್ಷರಾಗಿದ್ದರು. ತಮ್ಮ ವೃತ್ತಿಜೀವನದುದ್ದಕ್ಕೂ ಆಟೋ ಉದ್ಯಮದೊಂದಿಗೆ ನಿಕಟ ಸಂಬಂಧ ಇರಿಸಿಕೊಂಡಿದ್ದರು.
ಪಿಲಾನಿಯ ಬಿರ್ಲಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆ್ಯಂಡ್ ಸೈನ್ಸ್‌ನಿಂದ ಹೊರಬಂದ ನಂತರ, 1991ರಲ್ಲಿ ಬಜಾಜ್ ಆಟೋಗೆ ಸೇರಿದರು. ಈ ಬಳಿಕ ಟಿವಿಎಸ್ ಮೋಟಾರ್ಸ್‌ಗೆ ತೆರಳಿ, ಅಲ್ಲಿ 9 ವರ್ಷಗಳ ಕಾಲ ದುಡಿದರು.
ಟಾಟಾ ಮೋಟಾರ್ಸ್‌ನ ಬೆಳೆಯುತ್ತಿರುವ ಇವಿ ವಿಭಾಗದಲ್ಲಿ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ಚುಕ್ಕಾಣಿ ಹಿಡಿದಿದ್ದ ಅವರು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳನ್ನು ಸದುಪಯೋಗಪಡಿಸಿಕೊಳ್ಳುವ ಪ್ರತಿಪಾದಕರಾಗಿದ್ದರು.