ನವದೆಹಲಿ: ಲಾಕ್ಡೌನ್ನಿಂದ ತವರಿಗೆ ತೆರಳಲು ಆಗದೇ ಕೆಲಸದ ಪ್ರದೇಶಗಳಲ್ಲಿ ಸಿಲುಕಿಕೊಂಡಿದ್ದವರ ಪೈಕಿ 20 ಲಕ್ಷಕ್ಕೂ ಅಧಿಕ ವಲಸಿಗ ಕಾರ್ಮಿಕರಿಗೆ ಮೇ 1ರಿಂದ ಇಲ್ಲಿಯವರೆಗೂ 1,565 ಶ್ರಮಿಕ್ ವಿಶೇಷ ರೈಲುಗಳ ಸೇವೆ ಕಲ್ಪಿಸಲಾಗಿದೆ ಎಂದು ಕೇಂದ್ರ ರೈಲ್ವೆ ಮತ್ತು ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ರೈಲ್ವೆ ಇಲಾಖೆಯ 1,565 ಶ್ರಮಿಕ್ ವಿಶೇಷ ರೈಲುಗಳಲ್ಲಿ 20 ಲಕ್ಷಕ್ಕೂ ಅಧಿಕ ವಲಸೆ ಕಾರ್ಮಿಕರನ್ನು ತವರು ಊರುಗಳಿಗೆ ವಾಪಸ್ ಕಳುಹಿಸಿಕೊಡಲಾಗಿದೆ. ಉತ್ತರ ಪ್ರದೇಶ, ಬಿಹಾರ ಮತ್ತು ಮಧ್ಯಪ್ರದೇಶಗಳಲ್ಲಿ ಕ್ರಮವಾಗಿ 837, 428 ಮತ್ತು 100 ಶ್ರಮಿಕ್ ವಿಶೇಷ ರೈಲುಗಳು ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ ಎಂದು ಗೋಯಲ್ ಟ್ವಿಟರ್ನಲ್ಲಿ ತಿಳಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ದಿನಕ್ಕೆ ಎರಡು ಲಕ್ಷಕ್ಕೂ ಹೆಚ್ಚು ಜನರನ್ನು ಸಾಗಿಸಲಾಗುತ್ತಿದೆ ಎಂದು ರೈಲ್ವೆ ಸಚಿವಾಲಯದ ವಕ್ತಾರರು ತಿಳಿಸಿದ್ದರು. ಮುಂದಿನ ದಿನಗಳಲ್ಲಿ ಇದು ಮೂರು ಲಕ್ಷ ಪ್ರಯಾಣಿಕರಾಗುವ ಸಾಧ್ಯತೆಯಿದೆ. ಈ 1,565 ಶ್ರಮಿಕ್ ವಿಶೇಷ ರೈಲುಗಳು ಆಂಧ್ರಪ್ರದೇಶ, ದೆಹಲಿ, ಗುಜರಾತ್, ಹರಿಯಾಣ, ಮಹಾರಾಷ್ಟ್ರ, ಪಂಜಾಬ್, ರಾಜಸ್ಥಾನ, ತಮಿಳುನಾಡು, ತೆಲಂಗಾಣ, ಕರ್ನಾಟಕ, ಕೇರಳ, ಗೋವಾ, ಜಾರ್ಖಂಡ್, ಉತ್ತರ ಪ್ರದೇಶ, ಮಧ್ಯಪ್ರದೇಶದ ವಿವಿಧ ರಾಜ್ಯಗಳಿಂದ ಬಂದಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಸೋಮವಾರ ಗೋಯಲ್ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಬಿಹಾರ ಸಿಎಂ ನಿತೀಶ್ ಕುಮಾರ್ ಅವರೊಂದಿಗೆ ಮಾತನಾಡಿದ್ದರು. ಈ ವೇಳೆ, ಆದಿತ್ಯನಾಥ್ ಅವರು, 'ದೇಶದ ಹಲವು ಭಾಗಗಳಲ್ಲಿ ಸಿಕ್ಕಿಬಿದ್ದ ವಲಸೆ ಕಾರ್ಮಿಕರನ್ನು ಸಾಗಿಸಲು ಶ್ರಮಿಕ್ ವಿಶೇಷ ರೈಲುಗಳ ಸಂಖ್ಯೆ ದ್ವಿಗುಣಗೊಳಿಸಲು' ಮನವಿ ಮಾಡಿದ್ದರು. ನಿತೀಶ್ ಕುಮಾರ್ ಸಹ, '50 ಶ್ರಮಿಕ್ ವಿಶೇಷ ರೈಲುಗಳನ್ನು ಓಡಿಸುವಂತೆ' ಕೋರಿದ್ದರು. ಈ ಇಬ್ಬರೂ ಮುಖ್ಯಮಂತ್ರಿಗಳ ಬೇಡಿಕೆಗಳಿಗೆ ಗೋಯಲ್ ಅನುಮೋದನೆ ನೀಡಿದ್ದಾರೆ.