ಬೆಂಗಳೂರು: ಕಾಫಿ ಡೇ ಮಾಲೀಕ/ ಮಾಜಿ ಸಿಎಂ ಎಸ್. ಎಂ. ಕೃಷ್ಣ ಅಳಿಯ ಸಿದ್ದಾರ್ಥ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಐಟಿ ಅಧಿಕಾರಿಗಳನ್ನು ದೂರಿದ್ದಾರೆ.
ಐಟಿ ಇಲಾಖೆಯ ಅಧಿಕಾರಿಗಳು ಜನರಿಗೆ ಕಿರುಕುಳ ನೀಡುತ್ತಿದ್ದಾರೆ. ಅವರಿಗೆ ಏನು ಬೇಕು ಎಂಬುದು ಗೊತ್ತಿಲ್ಲ. ಅವರು ತಮ್ಮ ಕಚೇರಿಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಅವರು ಜರುಗಿಸುವ ಕಾನೂನು ಕ್ರಮ ವಿಭಿನ್ನವಾಗಿವೆ. ತನಿಖೆ ನಡೆಸಲು ಅವರಿಗೆ ಸ್ವಾತಂತ್ರವಿದೆ. ಆದರೆ, ದಿನನಿತ್ಯದ ತೊಂದರೆಗಳಿಂದ ಹೊರಬರಲು ಜನರಿಗೆ ಅವಕಾಶ ನೀಡಬೇಕು. ಈ ದೇಶದಲ್ಲಿ ಈಗ ಅದು ನಡೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮುಂಜಾನೆ ನಾಪತ್ತೆಯಾದ ಸುದ್ದಿ ಕೇಳುತ್ತಿದ್ದಂತೆ ಶಾಕ್ ಆದೆ. ನಮ್ಮ ಅಧಿಕಾರಿಗಳು ಅವರಿಗಾಗಿ ಶೋಧ ನಡೆಸುತ್ತಿದ್ದಾರೆ. ಸಿದ್ಧಾರ್ಥ್ ಹಲವು ಸಮಸ್ಯೆಗಳನ್ನು ಎದುರಿಸಿ, ಅನೇಕ ಹಳ್ಳಿಗರಿಗೆ ಜೀವನ ರೂಪಿಸಿಕೊಳ್ಳಲು ನೆರವಾಗಿದ್ದಾರೆ. ಅವರು ಯುವಕರಿಗೆ ಮಾದರಿ ಆಗಿದ್ದರು ಎಂದರು.
ನಾನು ಅವರನ್ನು 7 ತಿಂಗಳ ಹಿಂದೆ ಭೇಟಿಯಾಗಿದ್ದೆ. ಅವರು ಆದಾಯ ತೆರಿಗೆ ದಾಳಿಗಳ ಬಗ್ಗೆ ಮಾತನಾಡಿದ್ದರು. ಆದರೆ, ಯಾರ ವಿರುದ್ಧವೂ ಯಾವುದೇ ಆರೋಪಗಳನ್ನು ಮಾಡಲಿಲ್ಲ. ಅವರ ಕೊನೆಯ ಪತ್ರವನ್ನು ಮಾಧ್ಯಮದಲ್ಲಿ ನೋಡಿದಾಗ ಆಶ್ಚರ್ಯಕರವಾಗಿದೆ. ಕೆಲವು ಇಲಾಖೆಗಳಲ್ಲಿ ಕೆಲವು ಸಮಸ್ಯೆಗಳಿವೆ ಎಂದು ಕುಮಾರಸ್ವಾಮಿ ಹೇಳಿದರು.