ಬೆಂಗಳೂರು: ರಾಜ್ಯದ ಮುಖ್ಯಮಂತ್ರಿಯಾಗಿ 7ನೇ ಬಾರಿಗೆ ಬಜೆಟ್ ಮಂಡಿಸುತ್ತಿರುವ ಬಿಎಸ್ವೈ ಮೊದಲ ಬಾರಿಗೆ ಮಕ್ಕಳ ಸರ್ವತೋಮುಖ ಅಭಿವೃದ್ದಿ ಗಮನದಲ್ಲಿಟ್ಟುಕೊಂಡು ಮಕ್ಕಳ ಪ್ರಗತಿಗಾಗಿ ಬಜೆಟ್ ಮಂಡಿಸಿದ್ದಾರೆ.
ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಕರ್ನಾಟಕ ಸರ್ಕಾರ ಮಕ್ಕಳಿಗಾಗಿ ಆಯವ್ಯಯ ಮಂಡಿಸಿದ್ದು ಮಕ್ಕಳಿಗಾಗಿ ₹ 36,340 ಕೋಟಿ ಮೀಸಲಿಡಲಾಗಿದೆ ಎಂದು ತಿಳಿಸಿದರು.
ಕರ್ನಾಟಕ ಪಬ್ಲಿಕ್ ಶಾಲೆಗಳ ಮೂಲ ಸೌಕರ್ಯ ವೃದ್ಧಿಗೆ ಕ್ರಮ ಹಾಗೂ ಮಕ್ಕಳು ಪಠ್ಯವನ್ನು ಉಲ್ಲಾಸದಿಂದ ಕಲಿಯುವಂತೆ ಮಾಡಲು ತಿಂಗಳಲ್ಲಿ 2 ದಿನ ಬ್ಯಾಗ್ ರಹಿತ ದಿನವಾಗಿ ಮಾಡಲು ಸೂಚನೆ ನೀಡಿದರು. ಅಲ್ಲದೇ ಶಿಕ್ಷಕರಿಗಾಗಿ ಶಿಕ್ಷಕ ಮಿತ್ರ ಮೊಬೈಲ್ ಆ್ಯಪ್ ತರುವುದಾಗಿ ಹೇಳಿದರು.
ಅಲ್ಲದೇ ಸ್ಕೌಟ್ಸ್ ಮತ್ತು ಗೈಡ್ಸ್ ಕೇಂದ್ರಗಳಿಗೆ 4 ಕೋಟಿ ರೂಪಾಯಿ ಅನುದಾನ. ವಸತಿ ಶಾಲೆಗಳ ಮೇಲ್ದರ್ಜೆಗೆ ಕ್ರಮ ಮತ್ತು ಅಲ್ಪಸಂಖ್ಯಾತರ ಇಲಾಖೆ ನಿರ್ವಹಿಸುತ್ತಿರುವ 5 ಮೊರಾರ್ಜಿ ವಸತಿ ಶಾಲೆಗಳನ್ನು ಪದವಿ ಪೂರ್ವ ಕಾಲೇಜುಗಳಾಗಿ ಮೇಲ್ದರ್ಜೆಗೆ ಏರಿಸಲು ಕ್ರಮಕೈಗೊಳ್ಳಲಾಗಿದೆ ಎಂದರು.
ಇಷ್ಟೇ ಅಲ್ಲದೇ ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ಆಯಾ ತಾಲೂಕಿನ ವಿದ್ಯಾರ್ಥಿಗಳಿಗೆ ಶೇ 25ರಷ್ಟು ಸ್ಥಾನಗಳನ್ನು ಮೀಸಲಿಡಲು ತೀರ್ಮಾನಿಸಿದ್ದು, ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳನ್ನು ಗಮನದಲ್ಲಿರಿಸಿಕೊಂಡು ಶಿವಮೊಗ್ಗದಲ್ಲಿ ಕೃಷಿ ವಿವಿ ಸ್ಥಾಪನೆಗೆ ಒತ್ತು ನೀಡುವುದಾಗಿ ಹೇಳಿದರು.
2020-21ನೇ ಸಾಲಿನ ಆಯವ್ಯಯದಲ್ಲಿ ಶೇ.15ರಷ್ಟನ್ನು ಮಕ್ಕಳಿಗಾಗಿ ಮೀಸಲಿಟ್ಟಿರುವುದು ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ರಾಜ್ಯದ ಬದ್ಧತೆಯನ್ನು ಇದು ತೋರಿಸುತ್ತದೆ.