ಭಾರತ 1990ರ ದಶಕದಿಂದ ತನ್ನ ಆಸ್ತಿ ದರದಲ್ಲಿ ಅರ್ಧದಷ್ಟು ಕುಸಿದಿದೆ ಎಂದು ವಿಶ್ವ ಹಣಕಾಸು ನಿಧಿಯ (ಐಎಂಎಫ್) ಇತ್ತೀಚಿನ ವಾರ್ಷಿಕ ಸಭೆಯಲ್ಲಿ ವಿಶ್ವಬ್ಯಾಂಕ್ ಹೇಳಿತ್ತು. ಆದರೆ, ವಾಸ್ತವದಲ್ಲಿ, ಕಳೆದ 3 ವರ್ಷಗಳಿಂದ ದೇಶದಲ್ಲಿ ಹಸಿವಿನಿಂದ ಬಳಲುತ್ತಿರುವರ ಸಂಖ್ಯೆ ಹೆಚ್ಚಾಗಿದೆ.
ಜಾಗತಿಕ ಹಸಿವು ಸೂಚ್ಯಂಕದಲ್ಲಿ (ಜಿಹೆಚ್‌ಐ), ಸಮೀಕ್ಷೆ ನಡೆಸಿದ 117 ದೇಶಗಳಲ್ಲಿ ಭಾರತ 102ನೇ ಸ್ಥಾನದಲ್ಲಿದೆ. ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ (94 ನೇ ಸ್ಥಾನ), ಬಾಂಗ್ಲಾದೇಶ (88 ನೇ ಸ್ಥಾನ), ನೇಪಾಳ (73 ನೇ ಸ್ಥಾನ), ಮಯನ್ಮಾರ್ (69 ನೇ ಸ್ಥಾನ) ಮತ್ತು ಶ್ರೀಲಂಕಾ (66 ನೇ ಸ್ಥಾನ) ಈ ಪಟ್ಟಿಯಲ್ಲಿ ಪ್ರಗತಿ ದಾಖಲಿಸಿವೆ.
ಭಾರತದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯೇ ದೇಶದ ಹಸಿವಿಗೆ ಕಾರಣವಾಗಿದೆ ಎಂದು ಜಾಗತಿಕ ಹಸಿವು ಸೂಚ್ಯಂಕ ವಿಶ್ಲೇಷಣೆ ಬಹಿರಂಗಪಡಿಸಿದೆ. ಈ ವರದಿ ನಿಜವಾಗಿದ್ದರೆ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಚೀನಾವು ಜಿಹೆಚ್‌ಐನಲ್ಲಿ 25ನೇ ಸ್ಥಾನದಲ್ಲಿರುವುದು ವಿಸ್ಮಯಕಾರಿಯಾಗಿದೆ. ಅಪೌಷ್ಟಿಕತೆ ಮತ್ತು ಸುರಕ್ಷಿತ ಆಹಾರದ ಕೊರತೆಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ ಎಂದು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ ಈ ಹಿಂದೆ ಬಹಿರಂಗಪಡಿಸಿತ್ತು. ಅತಿಯಾದ ಹವಾಮಾನ ಬದಲಾವಣೆಗಳು ಮತ್ತು ಜಾಗತಿಕ ತಾಪಮಾನ ಏರಿಕೆಯಿಂದಾಗಿ ಭಾರತದಂತಹ ದಕ್ಷಿಣ ಏಷ್ಯಾದ ದೇಶಗಳಲ್ಲಿ ಆಹಾರ ಉತ್ಪಾದನೆಯಲ್ಲಿ ಶೇ.50 ರಷ್ಟು ಕುಸಿಯಲಿದೆ ಎಂದು ವಿಶ್ವ ಬ್ಯಾಂಕ್ ಎಚ್ಚರಿಸಿದೆ.
ಹವಾಮಾನ ಬದಲಾವಣೆ ಮತ್ತು ಅದರ ಪರಿಣಾಮಗಳು ಸುಸ್ಥಿರ ಅಭಿವೃದ್ಧಿಗೆ ಅಡ್ಡಗಾಲು ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಕೃಷಿ ಉತ್ಪನ್ನ ಉತ್ಪಾದನೆ ಕೊರತೆ ಮತ್ತು ಹೆಚ್ಚುತ್ತಿರುವ ಜನಸಂಖ್ಯೆಯ ಅಗತ್ಯತೆಗಳಿಗೆ ಅನುಗುಣವಾಗಿ ಕೃಷಿ ಚಟುವಟಿಕೆ ನಡೆಯದಿರುವುದು ಆಹಾರ ಕೊರತೆಗೆ ಕಾರಣವಾಗಲಿದೆ. ಇಂದಿಗೂ ಗ್ರಾಮೀಣ ಜನಸಂಖ್ಯೆಯ ಶೇ.75 ರಷ್ಟು ಮತ್ತು ನಗರ ಜನಸಂಖ್ಯೆಯ ಶೇ.50ರಷ್ಟು ಜನರು ಆಹಾರ ಉತ್ಪನ್ನಗಳನ್ನು ಖರೀದಿಸಲು ಸರ್ಕಾರದ ಪಡಿತರ ವ್ಯವಸ್ಥೆಯನ್ನು ಅವಲಂಬಿಸಿದ್ದಾರೆ. ಇಲ್ಲಿನ ಅಸಮರ್ಪಕ ಪೂರೈಕೆ ಜಾಲದಿಂದಾಗಿ ಹೆಚ್ಚಿನ ಜನರ ಆಹಾರದ ಕೊರತೆ ಎದುರಿಸುತ್ತಿದ್ದಾರೆ.
2013ರಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ನು ರೂಪಿಸುವ ಮೂಲಕ ಮಧ್ಯಾಹ್ನದ ಊಟ ಮತ್ತು ಐಸಿಡಿಎಸ್ ಅನ್ನು ಒಂದೇ ಸೂರಿನಡಿ ತರಲಾಗಿದ್ದರೂ ರಾಜ್ಯ ಸರ್ಕಾರಗಳು ಇದರ ಅನುಷ್ಠಾನದಲ್ಲಿ ಎಡವಿದವು. ಪರಿಣಾಮವಾಗಿ ಹಲವಾರು ಸಮಸ್ಯೆಗಳು ಉದ್ಬವಿಸಿದವು. ಆಹಾರ ಧಾನ್ಯ ಪೂರೈಕೆ, ಸಂಗ್ರಹಣೆ ಮತ್ತು ನಿರ್ವಹಣಾ ವ್ಯವಸ್ಥೆಯಲ್ಲಿನ ಲೋಪದೋಷಗಳೊಂದಿಗೆ ನಾಲ್ಕನೇ ಒಂದು ಭಾಗದಷ್ಟು ಆಹಾರ ಧಾನ್ಯಗಳು ಹಾನಿಗೊಳಗಾಗುತ್ತಿವೆ. ನೈಸರ್ಗಿಕ ವಿಪತ್ತುಗಳು ಮತ್ತು ಪರಿಸರ ಸಮಸ್ಯೆಗಳು ಸಹ ಆಹಾರ ಸುರಕ್ಷತೆಗೆ ಸವಾಲುಗಳನ್ನು ಒಡ್ಡುತ್ತಿವೆ.
ಮಳೆಯ ಅನಿರ್ದಿಷ್ಟತೆ ಬೆಳೆದು ನಿಂತಿರುವ ಬೆಳೆಗಳನ್ನು ನಾಶಪಡಿಸುತ್ತಿದ್ದು ರೈತರಿಗೆ ನಷ್ಟವಾಗುತ್ತಿದೆ. ಬರಗಾಲದಿಂದಾಗಿ ಅರ್ಧದಷ್ಟು ಕೃಷಿ ಭೂಮಿಗೆ ಸಹ ಸಾಕಷ್ಟು ನೀರು ಸರಬರಾಜಾಗುತ್ತಿಲ್ಲ. ಇದರ ಪರಿಣಾಮವಾಗಿ ಕೃಷಿ ಭೂಮಿಯು ಬಂಜರಾಗುತ್ತಿದೆ. ಭೂಮಿ ಬಳಕೆಯಲ್ಲಿನ ಬದಲಾವಣೆ ಆಹಾರ ಧಾನ್ಯದ ಉತ್ಪನ್ನಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನ ಏರಿಕೆ ಇದೇ ರೀತಿ ಮುಂದುವರಿದರೆ ಭವಿಷ್ಯದ ಪೀಳಿಗೆಯ ಬದುಕು ಕಷ್ಟವಾಗಬಹುದು.
ಆರ್ಥಿಕ ಜನಗಣತಿಯಲ್ಲಿ ಬಡತನದ ಏರಿಕೆಯ ಬಗ್ಗೆ ಪ್ರಸ್ತಾಪಿಸಲಾಗಿದ್ದು, ಅಪೌಷ್ಟಿಕತೆಯಿಂದ ಬಳಲುತ್ತಿರುವರ ಸಂಖ್ಯೆ ಹೆಚ್ಚುತ್ತಿದೆ. ಇದರ ಪರಿಣಾಮ ಮಹಿಳೆಯರು ಮತ್ತು ಮಕ್ಕಳಲ್ಲಿ ಹೆಚ್ಚಿದೆ. 15 ರಿಂದ 49 ವರ್ಷದೊಳಗಿನ ಮಹಿಳೆಯರಲ್ಲಿ 50 ಪ್ರತಿಶತ ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಇತ್ತೀಚಿನ ಜಿಹೆಚ್‌ಐ ಅಂಕಿಅಂಶಗಳ ಪ್ರಕಾರ ಭಾರತದಲ್ಲಿ ಅಪೌಷ್ಟಿಕ ಮಕ್ಕಳ ಪ್ರಮಾಣವು ಶೇ.20.8ರಷ್ಟು ಹೆಚ್ಚಾಗಿದೆ. 37.9 ರಷ್ಟು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. 9 ರಿಂದ 23 ತಿಂಗಳ ನಡುವಿನವರು ಮಾತ್ರ ಸರಿಯಾದ ಪೋಷಣೆ ಪಡೆಯುತ್ತಿದ್ದಾರೆ.
ಈ ಸಂಖ್ಯೆಗಳು ಹಸಿವು ನೀಗಿಸುವಿಕೆ ಆಹಾರ ಕ್ಷೇತ್ರದಲ್ಲಿ ನಮ್ಮ ರಾಷ್ಟ್ರದ ದಯನೀಯ ಸ್ಥಿತಿಯನ್ನು ತೋರಿಸುತ್ತವೆ. ಅಪೌಷ್ಟಿಕತೆ, ಕೊಳಕಾದ ಕುಡಿಯುವ ನೀರು, ನೈರ್ಮಲ್ಯ ಸೌಲಭ್ಯಗಳ ಕೊರತೆ, ಕಾಲರಾ, ಮಲೇರಿಯಾ ಮತ್ತು ವೈರಲ್ ಸೋಂಕುಗಳಂತಹ ಕಾಯಿಲೆಗಳೊಂದಿಗೆ ಮಕ್ಕಳ ಜೀವವನ್ನು ಬಲಿ ತೆಗೆದುಕೊಳ್ಳುತ್ತಿವೆ. ಆಹಾರ ಭದ್ರತೆಯು ಭವಿಷ್ಯದಲ್ಲಿ ಇನ್ನೂ ಅನೇಕ ಕಠಿಣ ಸವಾಲುಗಳನ್ನು ಸೃಷ್ಟಿಸುವ ಅಪಾಯವಿದೆ. ಉದ್ಯೋಗ ಮತ್ತು ಆಹಾರವನ್ನು ಒದಗಿಸಲು ಸರ್ಕಾರಗಳು ಉಪಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದರೂ, ನೈಸರ್ಗಿಕ ವಿಕೋಪಗಳು ಮತ್ತು ಇತರ ಸಮಸ್ಯೆಗಳು ಆಹಾರ ಸುರಕ್ಷತೆಗೆ ಸವಾಲಾಗಿವೆ ಎಂಬುದು ಕಹಿ ಸತ್ಯ.
ತಾಯಿ ಮತ್ತು ಮಕ್ಕಳ ಸಮಗ್ರ ಅಭಿವೃದ್ಧಿ ನೀತಿಗಳು ಮತ್ತು ಯೋಜನೆಗಳೊಂದಿಗೆ ಅಪೌಷ್ಟಿಕತೆಯ ಭೀತಿಯನ್ನು ನಿವಾರಿಸಬಹುದು. 2022ರ ವೇಳೆಗೆ ಭಾರತವನ್ನು ಅಪೌಷ್ಟಿಕತೆ ಮುಕ್ತ ರಾಷ್ಟ್ರವನ್ನಾಗಿ ಮಾಡಲು, ಸರಿಯಾದ ಅನುಷ್ಠಾನದೊಂದಿಗೆ ಸರ್ವಾಂಗೀಣ ನೀತಿಯನ್ನು ರೂಪಿಸಬೇಕಿದೆ. ಲಭ್ಯವಿರುವ ಸಂಪನ್ಮೂಲಗಳನ್ನು ಸುಸ್ಥಿರ ಅಭಿವೃದ್ಧಿಗೆ ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ಕೃಷಿ ಉತ್ಪನ್ನಗಳನ್ನು ಹೆಚ್ಚಿಸಲು ಕ್ರಮಗಳು ಅಗತ್ಯ.
ಹೊಸ ಬೆಳೆ ಪ್ರಭೇದಗಳನ್ನು ಪರಿಚಯಿಸುವ ಮೂಲಕ ಮತ್ತು ಕಾಳಸಂತೆಯ ಮಾರಾಟಗಾರರನ್ನು ನಿಗ್ರಹಿಸುವ ಮೂಲಕ ಸರಬರಾಜು ಸರಪಳಿಯನ್ನು ಸುಧಾರಿಸಬಹುದು. ಸುರಕ್ಷಿತ ಕುಡಿಯುವ ನೀರು ಸರಬರಾಜು ಒದಗಿಸುವ ಮೂಲಕ ಮತ್ತು ನೀರಿನ ಸಂಪನ್ಮೂಲಗಳ ಸಂರಕ್ಷಣೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದರೊಂದಿಗೆ ಉತ್ತಮ ಫಲಿತಾಂಶಗಳನ್ನು ಸಾಧಿಸಬಹುದು. ಪರಿಸರವನ್ನು ರಕ್ಷಿಸುವ ಮೂಲಕ ನೈಸರ್ಗಿಕ ವಿಪತ್ತುಗಳನ್ನು ತಡೆಯಬಹುದು. ಆಗ ಮಾತ್ರ, ಮಕ್ಕಳು ಅಪೌಷ್ಟಿಕತೆಯ ವಿರುದ್ಧ ಹೋರಾಡಬಹುದು ಮತ್ತು ಆರೋಗ್ಯವಂತ ನಾಗರಿಕರಾಗಬಹುದು.