ಹೊಸದಿಲ್ಲಿ: ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸ್ತುತ ವರ್ಷದ ಮಾರ್ಚ್ ಹಾಗೂ ಏಪ್ರಿಲ್ ತಿಂಗಳುಗಳಲ್ಲಿ ಭಾರತದ ಸ್ಮಾರ್ಟ್ಫೋನ್ ಉದ್ಯಮ ಭಾರಿ ಹಿಂಜರಿತ ಕಂಡಿದೆ. ಕೊರೊನಾ ವೈರಸ್ ಕಾರಣದಿಂದ ಈ ಅವಧಿಯಲ್ಲಿ ಭಾರತದ ಸ್ಮಾರ್ಟ್ಫೋನ್ ವಲಯ 2 ಬಿಲಿಯನ್ ಯುಎಸ್ ಡಾಲರ್ ನಷ್ಟ ಅನುಭವಿಸುವಂತಾಗಿದೆ.
ಮಾರ್ಚ್, ಏಪ್ರಿಲ್ ತಿಂಗಳುಗಳಲ್ಲಿ ಶಿಪ್ಮೆಂಟ್ಗಳು ಕಡಿಮೆಯಾಗಿವೆ. ಮಾರ್ಚ್ ಮಧ್ಯದವರೆಗೂ ಸಣ್ಣ ಪ್ರಮಾಣದಲ್ಲಿದ್ದ ವ್ಯಾಪಾರ ಹಿಂಜರಿತ ಈಗ ಹೆಚ್ಚಾಗುತ್ತಿದೆ. 2019 ರಲ್ಲಿ ಒಟ್ಟು 158 ಮಿಲಿಯನ್ ಶಿಪ್ಮೆಂಟ್ಗಳಾಗಿದ್ದರೆ, 2020 ರಲ್ಲಿ ಈ ಸಂಖ್ಯೆ 153 ಮಿಲಿಯನ್ಗೆ ಕುಸಿದಿದೆ. ಅಂದರೆ ಒಟ್ಟು ಶೇ.3 ರಷ್ಟು ಶಿಪ್ಮೆಂಟ್ ಕಡಿಮೆಯಾಗಿದೆ ಎಂದು ಮಾರುಕಟ್ಟೆ ವಿಶ್ಲೇಷಕ ಸಂಸ್ಥೆ ಕೌಂಟರಪಾಯಿಂಟ್ ರಿಸರ್ಚ್ ತಿಳಿಸಿದೆ.
"ವರ್ಷದಿಂದ ವರ್ಷಕ್ಕೆ ಹೋಲಿಸಿದರೆ ಈ ಮಾರ್ಚ್ನಲ್ಲಿ ಶಿಪ್ಮೆಂಟ್ಗಳು ಶೇ.27 ರಷ್ಟು ಕಡಿಮೆಯಾಗುವ ನಿರೀಕ್ಷೆಯಿದೆ. ಏಪ್ರಿಲ್ ಅರ್ಧ ತಿಂಗಳು ಲಾಕ್ಡೌನ್ನಲ್ಲಿ ಇರಲಿದೆ ಎಂಬುದನ್ನು ಪರಿಗಣಿಸಿದಲ್ಲಿ ಸ್ಮಾರ್ಟ್ಫೋನ್ ಉದ್ಯಮಕ್ಕೆ 2 ಬಿಲಿಯನ್ ಯುಎಸ್ ಡಾಲರ್ನಷ್ಟು ನಷ್ಟವಾಗುವ ಸಾಧ್ಯತೆಗಳಿವೆ." ಎಂದು ಕೌಂಟರಪಾಯಿಂಟ್ ರಿಸರ್ಚ್ ಸಂಸ್ಥೆಯ ಸಹ ನಿರ್ದೇಶಕ ತರುಣ್ ಪಾಠಕ್ ಹೇಳಿದ್ದಾರೆ.
"ಲಾಕ್ಡೌನ್ ಮತ್ತಷ್ಟು ಅವಧಿಗೆ ಮುಂದುವರೆದಲ್ಲಿ ನಷ್ಟ ಇನ್ನೂ ಹೆಚ್ಚಾಗಬಹುದು ಹಾಗೂ ಸರಕು ಸೇವಾ ಜಾಲ ಸಂಪೂರ್ಣ ಕುಸಿಯಬಹುದು. ಅಲ್ಲದೇ ಬಾಕಿ ಪಾವತಿಗಳು ಸಹ ಬರದೇ ಇರಬಹುದು." ಎನ್ನುತ್ತಾರೆ ಪಾಠಕ್.
ಪ್ರಸ್ತುತ ಪರಿಸ್ಥಿತಿಗಳಲ್ಲಿ ಜನ ಹಣ ಉಳಿತಾಯ ಮಾಡುವುದರತ್ತ ಗಮನಹರಿಸುತ್ತಿದ್ದು, ಖರ್ಚು ಕಡಿಮೆ ಮಾಡುತ್ತಿದ್ದಾರೆ. ಹೀಗಾಗಿ ವರ್ಷದ ಮಧ್ಯದೊಳಗೆ ಎಲ್ಲವೂ ಸಾಮಾನ್ಯವಾದರೂ ಜನ ಈ ಮುಂಚಿನಂತೆ ಫೋನ್ಗಳ ಖರೀದಿಗೆ ಮುಂದಾಗಲಾರರು. ಬಹುತೇಕ ಹಬ್ಬದ ವೇಳೆಗೆ ಹೊಸ ಖರೀದಿ ಆರಂಭವಾಗಬಹುದು. ಸದ್ಯಕ್ಕೆ ಸ್ಮಾರ್ಟ್ಫೋನ್ಗಳು ಅಗತ್ಯ ವಸ್ತುಗಳ ಪಟ್ಟಿಯಲ್ಲಿ ಇಲ್ಲ. ಹೀಗಾಗಿ ಇವು ಆನ್ಲೈನ್ನಲ್ಲೂ ಮಾರಾಟಕ್ಕೆ ಲಭ್ಯವಿಲ್ಲ. ಆದರೆ ಪರಿಸ್ಥಿತಿ ಸಾಮಾನ್ಯವಾದ ನಂತರ ಆನ್ಲೈನ್ ಮಾರಾಟ ಪೋರ್ಟಲ್ಗಳು ಆಕರ್ಷಕ ಆಫರ್ಗಳನ್ನು ನೀಡಿ ಗ್ರಾಹಕರನ್ನು ಖರೀದಿಯತ್ತ ಸೆಳೆಯುವ ಎಲ್ಲ ಸಾಧ್ಯತೆಗಳಿವೆ ಎಂದು ಕೌಂಟರ್ ಪಾಯಿಂಟ್ ರಿಸರ್ಚ್ ಸಂಸ್ಥೆ ಹೇಳಿದೆ.