ಬೆಂಗಳೂರು: ದೇಶದ ಔಷಧ ವಲಯವು 2030ರ ವೇಳೆಗೆ 130 ಬಿಲಿಯನ್ ಡಾಲರ್ (ಸುಮಾರು 9.5 ಲಕ್ಷ ಕೋಟಿ ರೂಪಾಯಿ) ಉದ್ಯಮವಾಗಿ ಬೆಳೆಯಲಿದೆ ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಡಿ ವಿ ಸದಾನಂದ ಗೌಡ ಹೇಳಿದ್ದಾರೆ.
ಫೆಬ್ರವರಿ 25, 26 ಹಾಗೂ ಮಾರ್ಚ್ 1, 2ರಂದು ದೆಹಲಿಯಲ್ಲಿ ನಡೆಯಲಿರುವ ‘ಇಂಡಿಯಾ ಫಾರ್ಮಾ ಮತ್ತು ಇಂಡಿಯಾ ಮೆಡಿಕಲ್ ಡಿವೈಸ್ 2021’ ಸಮಾವೇಶದ ವಿವರಗಳ ಕುರಿತು ಮಾಹಿತಿ ನೀಡಿದ ಸಚಿವರು, ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ಔಷಧ ಇಲಾಖೆ, ಎಫ್‌ಐಸಿಸಿಐ ಮತ್ತು ಇನ್ವೆಸ್ಟ್ ಇಂಡಿಯಾ ಜಂಟಿಯಾಗಿ ಈ ಸಮಾವೇಶವನ್ನು ನಡೆಸುತ್ತಿವೆ. ಇದು 6ನೇ ಆವೃತ್ತಿ. ಬಂಡವಾಳ ಹೂಡಿಕೆದಾರರು, ಉದ್ದಿಮೆದಾರರು, ನವೋದ್ಯಮಿಗಳು, ತಂತ್ರಜ್ಞರು, ವಿಜ್ಞಾನಿಗಳು, ಅವಿಷ್ಕಾರಿಗಳು ಇದರಲ್ಲಿ ಭಾಗವಹಿಸಲಿದ್ದಾರೆ.
ಸಮಾವೇಶದಲ್ಲಿ ಸಾಮಾನ್ಯವಾಗಿ ಬಂಡವಾಳ ಹೂಡಿಕೆ, ಕಂಪನಿ ಸ್ಥಾಪನೆ, ವಿಸ್ತರಣೆ, ತಂತ್ರಜ್ಞಾನ ವಿನಿಮಯ ಇವೇ ಮುಂತಾದ ಒಪ್ಪಂದ-ಒಡಂಬಡಿಕೆಗಳು ಏರ್ಪಡುತ್ತವೆ ಎಂದರು.
ಪ್ರಧಾನಿ ನರೇಂದ್ರ ಮೋದಿಯವರು ದೇಶದ ನಾಯಕತ್ವವನ್ನು ವಹಿಸಿಕೊಂಡ ಮೇಲೆ ದೇಶದ ಬಹುತೇಕ ವಲಯಗಳಲ್ಲಿ ರಚನಾತ್ಮಕ ಸುಧಾರಣೆಗಳನ್ನು ತರಲಾಗಿದ್ದು ಭಾರತದಲ್ಲಿ ವ್ಯವಹಾರ, ಉದ್ದಮೆ ನಡೆಸುವುದು ಸುಲಭವಾಗಿದೆ. ಬೇರೆ ಬೇರೆ ದೇಶಗಳೊಂದಿಗೆ ನಮ್ಮ ರಾಜತಾಂತ್ರಕ ಸಂಬಂಧ ಹಾಗೂ ವ್ಯಾಪಾರ-ವಹಿವಾಟು ಬಲಗೊಳ್ಳುತ್ತಿದೆ. 2019-20ರಲ್ಲಿ ಔಷಧೋದ್ಯಮ ವಲಯದಲ್ಲಿ 3650 ಕೋಟಿ ರೂ. ವಿದೇಶಿ ಬಂಡವಾಳ ಹರಿದುಬಂದಿದೆ. ಅದಕ್ಕೂ ಹಿಂದಿನ ವರ್ಷದ ವಿದೇಶಿ ಬಂಡವಾಳ ಹೂಡಿಕೆಗೆ ಹೋಲಿಕೆ ಮಾಡಿದರೆ ಇದು ಶೇ 98ರಷ್ಟು ಹೆಚ್ಚುದೆ ಎಂದು ವಿವರಿಸಿದರು.
ಇದನ್ನೂ ಓದಿ: ಫೆಬ್ರವರಿ 15ರಂದು ಮಾರುಕಟ್ಟೆಗೆ ಬರಲಿದೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಫ್ 62
ಸ್ವಾವಲಂಬಿ ಭಾರತದ ಅಭಿಯಾನದ ಅಂಗವಾಗಿ ಔಷಧೋದ್ಯಮವನ್ನು ಸಂಪೂರ್ಣ ಸ್ವದೇಶಿ ಮಾಡಲು ಅನೇಕ ಮಹಾತ್ವಾಕಾಂಕ್ಷಿ ಯೋಜನೆಗಳನ್ನು ರೂಪಿಸಲಾಗಿದೆ. ದೇಶದಲ್ಲಿ ಮೂರು ಬಲ್ಕ್ ಡ್ರಗ್ ಕೈಗಾರಿಕಾ ಕೇಂದ್ರಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಕೇಂದ್ರ ಸರ್ಕಾರವು ನಮ್ಮ ಇಲಾಖೆಯ ಮೂಲಕ ಇವುಗಳಿಗೆ ತಲಾ ಒಂದು ಸಾವಿರ ಕೋಟಿ ರೂಪಾಯಿ ಒದಗಿಸುತ್ತದೆ. ಈ ಕೈಗಾರಿಕಾ ಕೇಂದ್ರಗಳಲ್ಲಿ ಔಷಧ ತಯಾರಿಕೆಗೆ ಬೇಕಾಗುವ ಮೂಲ ರಸಾಯನಿಕಗಳನ್ನು (APIs & KSMs) ಉತ್ಪಾದಿಸುವುದು ಮುಖ್ಯ ಉದ್ದೇಶ. ಹಾಗೆಯೇ ಭಾರತದ ಔಷಧೋದ್ಯಮವನ್ನು ಸ್ಪರ್ಧಾತ್ಮಕವಾಗಿ ರೂಪಿಸಲು ಉತ್ಪಾದನಾ ಆಧಾರಿತ ಪ್ರೋತ್ಸಾಹಧನ ನೀಡಲು ಯೋಜಿಸಲಾಗಿದೆ. 2025ರವರೆಗೆ ಜಾರಿಯಲ್ಲಿರುವ ಈ ಪ್ರೋತ್ಸಾಹಧನ ಯೋಜನೆಗೆ 6940 ಕೋಟಿ ರೂಪಾಯಿ ಮೀಸಲಿಡಲಾಗಿದೆ ಎಂದು ಸದಾನಂದ ಗೌಡ ತಿಳಿಸಿದರು.
“ಮೇಕ್ ಇನ್ ಇಂಡಿಯಾ” ನೀತಿಯಂತೆ ವೈದ್ಯಕೀಯ ಉಪಕರಣಗಳ ಉದ್ಯಮವನ್ನು ಉತ್ತೇಜಿಸಲು ನಾಲ್ಕು ʼಮೆಡಿಕಲ್ ಡಿವೈಸ್ ಪಾರ್ಕ್ʼಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇದಕ್ಕೆ ನಮ್ಮ ಇಲಾಖೆಯು ತಲಾ 100 ಕೋಟಿ ರೂಪಾಯಿ ಒದಗಿಸುತ್ತದೆ. ಈ ವಲಯದಲ್ಲಿಯೂ ಉತ್ಪಾದನಾ ಆಧಾರಿತ ಪ್ರೋತ್ಸಾಹ ಧನ ಯೋಜನೆ ಜಾರಿಗೊಳಿಸಲಾಗಿದ್ದು ಇದಕ್ಕಾಗಿ 3420 ಕೋಟಿ ರೂಪಾಯಿ ಒದಗಿಸಲಾಗುತ್ತಿದೆ. ಭಾರತದ ಮೆಡಿಕಲ್ ಡಿವೈಸ್ ಉದ್ಯಮವು ಶೇಕಡಾ 28ರ ಗತಿಯಲ್ಲಿ ಬೆಳವಣಿಗೆ ಹೊಂದುತ್ತಿದ್ದು 2025ರ ವೇಳೆಗೆ ಇದರ ವಹಿವಾಟು 50 ಬಿಲಿಯನ್ ಡಾಲರ್ ಅಂದರೆ ಸುಮಾರು 3.65 ಲಕ್ಷ ಕೋಟಿ ರೂಪಾಯಿ ತಲುಪಲಿದೆ ಎಂದು ಸದಾನಂದ ಗೌಡ ಹೇಳಿದರು.
ಕಾರ್ಯಕ್ರಮದಲ್ಲಿ ರಸಾಯನಿಕ ಹಾಗೂ ರಸಗೊಬ್ಬರ ಖಾತೆಯ ರಾಜ್ಯ ಸಚಿವ ಮನ್ಸುಖ್ ಎಲ್ ಮಾಂಡವಿಯಾ ಇಲಾಖಾ ಅಧಿಕಾರಿಗಳು, ಇನ್ವೆಸ್ಟ್ ಇಂಡಿಯಾ ಹಾಗೂ ಎಫ್‌ಐಸಿಸಿಐ ಪದಾಧಿಕಾರಿಗಳು ಪಾಲ್ಗೊಂಡರು.