ಮಾಸ್ಕೋ(ರಷ್ಯಾ): 2014ರಿಂದ ಇದೇ ಮೊದಲ ಬಾರಿಗೆ ಬ್ರೆಂಟ್ ಕಚ್ಚಾ ತೈಲ ಬೆಲೆ ಒಂದು ಬ್ಯಾರೆಲ್ಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ನೂರು ಡಾಲರ್ ಗಡಿಯನ್ನು ದಾಟಿದೆ. ಉಕ್ರೇನ್ ಮತ್ತು ರಷ್ಯಾ ನಡುವಿನ ಉದ್ವಿಗ್ನತೆ ಕಾರಣದಿಂದಾಗಿ ತೈಲಬೆಲೆಯಲ್ಲಿ ಹೆಚ್ಚಳ ಕಂಡುಬಂದಿದ್ದು, ಮುಂದಿನ ದಿನಗಳಲ್ಲಿ ಜಾಗತಿಕ ಇಂಧನ ಪೂರೈಕೆ ಅಸ್ತವ್ಯಸ್ತವಾಗುವ ಆತಂಕ ಎದುರಾಗಿದೆ.
ಏಷ್ಯಾದೊಂದಿಗಿನ ವ್ಯಾಪಾರದ ವೇಳೆ ಬ್ರೆಂಟ್ ಕಚ್ಚಾ ತೈಲದ ಬೆಲೆ ಒಂದು ಬ್ಯಾರೆಲ್ಗೆ 101.34 ಅಮೆರಿಕನ್ ಡಾಲರ್ಗೆ ತಲುಪಿದೆ. ಸೆಪ್ಟೆಂಬರ್ 2014ರಿಂದ ಇದೇ ಮೊದಲ ಬಾರಿಗೆ ಕಚ್ಚಾ ತೈಲ ಬೆಲೆ ಭಾರಿ ಏರಿಕೆ ಕಂಡಿದೆ.
ಅಮೆರಿಕದ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ನಲ್ಲಿ (WTI) ಕಚ್ಚಾ ತೈಲ ಬೆಲೆ ಬ್ಯಾರೆಲ್ಗೆ 4.22 ಡಾಲರ್ ಅಥವಾ ಶೇಕಡಾ 4.6ರಷ್ಟು ಏರಿಕೆ ಕಂಡಿದೆ. ಈ ಮೂಲಕ ಒಂದು ಬ್ಯಾರೆಲ್ ಬೆಲೆ 96.51 ಡಾಲರ್ಗೆ ಏರಿಕೆಯಾಗಿದೆ. ಇದೂ ಕೂಡಾ ಆಗಸ್ಟ್ 2014ರಿಂದ ಗಣನೀಯ ಮಟ್ಟದಲ್ಲಿ ಏರಿಕೆ ಕಂಡ ತೈಲ ಬೆಲೆಯಾಗಿದೆ.
ತೈಲ ಬೆಲೆ ಹೆಚ್ಚಳವಾಗಲು ಕಾರಣವೇನು?: ರಷ್ಯಾವು ಪ್ರಪಂಚದ ಎರಡನೇ ಅತಿದೊಡ್ಡ ತೈಲ ಉತ್ಪಾದಕ ರಾಷ್ಟ್ರವಾಗಿದೆ. ಯುರೋಪ್ನ ತೈಲ ಸಂಸ್ಕರಣಾ ಘಟಕಗಳಿಗೆ ಕಚ್ಚಾ ತೈಲವನ್ನು ರಷ್ಯಾ ದೇಶವೇ ಅತ್ಯಧಿಕವಾಗಿ ಮಾರಾಟ ಮಾಡುತ್ತದೆ. ಇದರ ಜೊತೆಗೆ ಯುರೋಪ್‌ಗೆ ನೈಸರ್ಗಿಕ ಅನಿಲ ಅತಿದೊಡ್ಡ ಪೂರೈಕೆದಾರ ರಾಷ್ಟ್ರವಾಗಿದ್ದು, ಯುದ್ಧದ ಕಾರಣದಿಂದಾಗಿ ತೈಲ ಪೂರೈಕೆಯನ್ನು ಸ್ಥಗಿತಗೊಳಿಸಿದೆ. ಇದಷ್ಟೇ ಅಲ್ಲದ ಕೆಲವು ರಾಷ್ಟ್ರಗಳು ನಿರ್ಬಂಧ ಹೇರಿರುವ ಕಾರಣದಿಂದ ತೈಲ ಬಿಕ್ಕಟ್ಟನ್ನು ಎದುರಿಸುವ ಸಾಧ್ಯತೆ ಇದೆ.
ಇದನ್ನೂ ಓದಿ: ಉಕ್ರೇನ್ ವಿಚಾರದಲ್ಲಿ ಭಾರತದ ತಟಸ್ಥ ನಿಲುವು ಸ್ವಾಗತಾರ್ಹ: ರಷ್ಯಾ