ನವದೆಹಲಿ: ದೇಶದಲ್ಲಿ ಕೋವಿಡ್ -19 ಎರಡನೇ ಅಲೆಯಿಂದ ಉಂಟಾಗುವ ಪರಿಸ್ಥಿತಿಯನ್ನು ನಿರ್ಣಯಿಸಲು ಮುಂದಿನ ಕೆಲವು ದಿನಗಳವರೆಗೆ ಕಾದು ನೋಡುವ ತಂತ್ರದ ಮೊರೆ ಹೋಗುವಂತೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾರತೀಯ ಉದ್ಯಮಕ್ಕೆ ಕರೆ ನೀಡಿದ್ದಾರೆ.
ಮುಂದಿನ ಕೆಲವು ದಿನಗಳ ಮಟ್ಟಿಗೆ ಸ್ವಲ್ಪ ಹೆಚ್ಚು ಜಾಗರೂಕತೆಯಿಂದ ಎದುರು ನೋಡಬೇಕೆಂದು ನಾನು ಉದ್ಯಮವನ್ನು ವಿನಂತಿಸುತ್ತೇನೆ. ನಂತರ ಈ ತ್ರೈಮಾಸಿಕ ಹೇಗಿರಲಿದೆ ಎಂದು ನೀವೇ ನಿರ್ಣಯಿಸಿ ಎಂದು ಹಣಕಾಸು ಸಚಿವರು ಫಿಕ್ಕಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯರಿಗೆ ವರ್ಚುವಲ್ ಭಾಷಣದಲ್ಲಿ ಹೇಳಿದರು.
ಫಿಕ್ಕಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯೊಂದಿಗಿನ ಹಣಕಾಸು ಸಚಿವರ ಸಂವಹನವು ಆಮ್ಲಜನಕ ಮತ್ತು ಔಷಧಿಗಳ ಕೊರತೆಯಿಂದ ಹಿಡಿದು ಕೋವಿಡ್ ಬಿಕ್ಕಟ್ಟು ಮತ್ತು ಆರ್ಥಿಕ ಕ್ಷೇತ್ರಗಳ ಮೇಲೆ ಅದರ ಪ್ರಭಾವದವರೆಗಿನ ಸಮಸ್ಯೆಗಳ ಬಗ್ಗೆ ಚರ್ಚಿಸಿದರು.
ಕೋವಿಡ್ -19 ಸಾಂಕ್ರಾಮಿಕ ರೋಗದ ಆರಂಭದಿಂದಲೂ ಆತಿಥ್ಯ, ವಾಯುಯಾನ, ಪ್ರಯಾಣ, ಪ್ರವಾಸೋದ್ಯಮ ಮತ್ತು ಹೋಟೆಲ್‌ಗಳು ಕಷ್ಟದ ಸಮಯಗಳನ್ನು ಕಂಡಿವೆ ಎಂದರು.
ನಾವು ಈ ಕ್ಷೇತ್ರಗಳಿಗೆ ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್ (ಇಸಿಜಿಎಲ್ಎಸ್ 2.0) ಅನ್ನು ವಿಸ್ತರಿಸಿದ್ದೇವೆ. ಕಳೆದ ವರ್ಷ ಅದು ನಿರ್ವಹಿಸುತ್ತಿದ್ದ ದಕ್ಷತೆಯು ವಾಯುಯಾನ ಮತ್ತು ಪ್ರವಾಸೋದ್ಯಮ ಕ್ಷೇತ್ರಕ್ಕೂ ಸಹ ಕಾರ್ಯನಿರ್ವಹಿಸುತ್ತದೆ ಎಂದು ಸಚಿವರು ಹೇಳಿದರು.
ಆಮ್ಲಜನಕ ಪೂರೈಕೆ ಕುರಿತು ಉಲ್ಲೇಖಿಸಿದ ಸೀತಾರಾಮನ್, ವಿಶೇಷವಾಗಿ ಹೆಚ್ಚು ಪೀಡಿತ ರಾಜ್ಯಗಳಿಗೆ ಅಂದರೆ ದೆಹಲಿ, ಮಹಾರಾಷ್ಟ್ರ, ಉತ್ತರ ಪ್ರದೇಶ, ಛತ್ತೀಸ್‌ಗಢ, ಮಧ್ಯಪ್ರದೇಶ, ಗುಜರಾತ್, ರಾಜಸ್ಥಾನ, ಪಂಜಾಬ್, ಹರಿಯಾಣ, ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳಿಗೆ ಪೂರೈಕೆಗೆ ಅನುಮತಿ ನೀಡಲಾಗಿದೆ ಎಂದು ಮಾಹಿತಿ ನೀಡಿದರು.