ಗಂಗಾವತಿ: ಸೀಲ್ ಡೌನ್ ಮಾಡಲಾಗಿದ್ದ ಪ್ರದೇಶದಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿದ್ದ ಮಳಿಗೆಗಳ ಮೇಲೆ ದಾಳಿ ಮಾಡಿದ ನಗರಸಭೆಯ ಕಮಿಷನರ್ ಕೆ.ಸಿ. ಗಂಗಾಧರ್ ದಂಡ ಪ್ರಯೋಗಕ್ಕೆ ಮಾಡಿದ್ದಾರೆ.
ರಾಜ್ಯ ಸರ್ಕಾರದ ನಿಯಮ ಉಲ್ಲಂಘನೆ ಮಾಡಿ ಅಂಗಡಿ ತೆರೆದು ವ್ಯಾಪಾರ ಮಾಡುತ್ತಿದ್ದ, ಕಿರಾಣಿ, ಆಭರಣ ಮತ್ತಿತರ ಅಂಗಡಿಗಳ ಮೇಲೆ ದಾಳಿ ನಡೆಸಿ ದಂಡ ವಸೂಲಿ ಮಾಡಲಾಗಿದೆ.
ಸೋಂಕು ಪತ್ತೆಯಾದ ಹಿನ್ನೆಲೆ ನಗರದ ಮಹಾತ್ಮ ಗಾಂಧಿ ವೃತ್ತವನ್ನು ಸೀಲ್ ಡೌನ್ ಮಾಡಲಾಗಿದೆ. ಆದರೆ ನಿಯಮ ಮೀರಿ ವ್ಯಾಪಾರ ನಡೆಸುತ್ತಿದ್ದ ನಾಗೇಶ್ವರ ಜುವೆಲರ್ಸ್ ಮಾಲೀಕರಾದ ಪವನ್ ಭಟ್ ನಾಗೇಶರಾವ್ ರಾಯಕರ್ ಮತ್ತು ಮಂಗರಾಮ್ ಎಂಬುವವರ ಅಂಗಡಿಗಳ ಮೇಲೆ ದಾಳಿ ಮಾಡಿ ದಂಡ ಹಾಕಲಾಗಿದೆ.ಗಾಂಧಿ ಚೌಕ್, ಡೇಲಿ ಮಾರ್ಕೆಟ್, ಮಟನ್ ಮಾರ್ಕೆಟ್ ಸೇರಿ ಜಾಮೀಯಾ ಮಸೀದಿ ಪ್ರದೇಶದ ಸುತ್ತ 150 ಮೀಟರ್ ಸೀಲ್ ಡೌನ್ ಮಾಡಲಾಗಿದೆ.
ನಿಯಮ ಮೀರಿದ ಎರಡು ಬಂಗಾರದ ಅಂಗಡಿಗಳಿಗೆ ತಲಾ 20 ಸಾವಿರ ರೂ. ಹಾಗೂ ಕಾಸ್ಮೆಟಿಕ್ ಅಂಗಡಿ ಮಾಲೀಕರಿಗೆ ಎರಡು ಸಾವಿರ ಸೇರಿ ಒಟ್ಟು 42 ಸಾವಿರ ರೂ. ದಂಡ ಹಾಕಲಾಗಿದೆ ಎಂದು ನಗರಸಭೆಯ ಅಧಿಕಾರಿಗಳು ತಿಳಿಸಿದ್ದಾರೆ.