ಹುಬ್ಬಳ್ಳಿ: ಕುಂದಗೋಳ ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಪ್ರಚಾರ ನಡೆಸಿದೆ. ಬೆಳಗ್ಗೆಯಿಂದ ಪ್ರಚಾರ ನಡೆಸಿದ ಸಚಿವ ಡಿ ಕೆ ಶಿವಕುಮಾರ್ ಅದರಗುಂಚಿಯಲ್ಲಿ ಪ್ರಚಾರ ನಡೆಸುತ್ತಿದ್ದ ವೇಳೆ ಇರುಸುಮುರಿಸು ಅನುಭವಿಸುವಂತಾಯಿತು. ಬಿಜೆಪಿ ಅಭ್ಯರ್ಥಿ ಎಸ್ ಐ ಚಿಕ್ಕನಗೌಡ್ರ ಸ್ವ-ಗ್ರಾಮವಾದ ಅದರಗುಂಚಿಯಲ್ಲಿ ಡಿಕೆಶಿ ಪ್ರಚಾರದ ವೇಳೆ ಬಿಜೆಪಿ ಕಾರ್ಯಕರ್ತರು ಮೋದಿ ಮೋದಿ ಎಂದು ಘೋಷಣೆ ಕೂಗಿದ್ದು, ಇದು ಡಿಕೆ ಶಿವಕುಮಾರಗೆ ಮುಜುಗರವನ್ನುಂಟು ಮಾಡಿತು.
ಬಳಿಕ ಮಾತನಾಡಿದ ಡಿಕೆಶಿ, ನಾನು ಶಿವಳ್ಳಿ ಚುನಾವಣೆ ಎಂದು ಇಲ್ಲಿಗೆ ಬಂದಿಲ್ಲ. ನನ್ನ ಚುನಾವಣೆ ಎಂದುಕೊಂಡು ಬಂದಿರುವೆ. ಶಿವಳ್ಳಿ ನನ್ನ ಸ್ನೇಹಿತ, ನನ್ನ ಮುಂದೆ ಕೇವಲ ಕ್ಷೇತ್ರದ ಅಭಿವೃದ್ದಿ ಬಗ್ಗೆ ಮಾತನಾಡುತ್ತಿದ್ದರು. ಮಹದಾಯಿ ವಿಚಾರವಾಗಿ ದೆಹಲಿಯಲ್ಲಿ ಹೋರಾಟ ಮಾಡಿದ್ದ ಶಿವಳ್ಳಿಯಂತಹ ಶಾಸಕನನ್ನು ನಾನು ನೋಡಿಲ್ಲ. ಅವನು ನಮ್ಮ ಜೊತೆ ಇಲ್ಲ, ಆದರೆ ಅವರು ಮಾಡಿದ ಅಭಿವೃದ್ಧಿ ಕೆಲಸಗಳು ನಮ್ಮ ಮುಂದೆ ಇವೆ. ನಾನು 7 ಬಾರಿ ಶಾಸಕನಾಗಿದ್ದೇನೆ. ಚಿಕ್ಕನಗೌಡ್ರ ಮೂರು ಬಾರಿ ಶಾಸಕರಾಗಿದ್ದರು.ನಾನು ಸಚಿವನಾಗಿದ್ದಾಗ ಚಿಕ್ಕನಗೌಡ್ರ ಒಮ್ಮೆಯೂ ನನ್ನ ಮುಂದೆ ಬಂದು ಅನುದಾನ ಕೇಳಲಿಲ್ಲ. ಚಿಕ್ಕನಗೌಡ್ರ ಮನೆಯಲ್ಲಿದ್ದು, ವಿಶ್ರಾಂತಿ ತೆಗದುಕೊಳ್ಳಬೇಕು ಎಂದರು.
ಈ ಕ್ಷೇತ್ರದಲ್ಲಿ ಅನೇಕ ಜನ ಬಡ ರೈತರು ಇದ್ದಾರೆ. ನಮ್ಮ ಶಿವಳ್ಳಿಯು ಒಬ್ಬ ಬಡವ. ಅವನು ಬಡ ಶಾಸಕ.ನನಗೆ ಐಟಿ ಇಲಾಖೆ ಕೊಡಬಾರದ ಚಿತ್ರಹಿಂಸೆ ನೀಡಿದ್ರೂ ಆಗ ನನ್ನ ಕಣ್ಣಲ್ಲಿ ನೀರು ಬರಲಿಲ್ಲ. ಇವತ್ತು ನನ್ನ ಗೆಳೆಯನಿಗಾಗಿ ಕಣ್ಣಿರು ಬಂದಿದೆ. ತಂದೆ ಸತ್ತಾಗ ಮಕ್ಕಳು ಪರೀಕ್ಷೆ ಬರೆದ ಇತಿಹಾಸ ಇಲ್ಲ. ನಮ್ಮ ಶಿವಳ್ಳಿ ಮಗಳು ತಮ್ಮ ತಂದೆ ಸಾವಿನಲ್ಲೂ ಪರೀಕ್ಷೆ ಬರೆದು ಸಾಧನೆ ಮಾಡಿದ್ದಾಳೆ.
ಬಿಜೆಪಿ ಅಭ್ಯರ್ಥಿ ಎಸ್.ಐ.ಚಿಕ್ಕನಗೌಡ್ರ ಅಭಿವೃದ್ಧಿ ಮಾಡಿದ್ದರೆ ಅವರಿಗೆ ಮತ ಕೊಡಿ, ಅವರು ಏನೂ ಅಭಿವೃದ್ಧಿ ಮಾಡಿಲ್ಲ.ಯಡಿಯೂರಪ್ಪನವರ ಟೈಮ್ ಮುಗಿದು ಹೋಗುತ್ತಿದೆ.ಅವರನ್ನ ರಾಜ್ಯಾಧ್ಯಕ್ಷ ಸ್ಥಾನದಿಂದ ಇಳಿಸುತ್ತಿದ್ದಾರೆ. ಅವರು ನಿವೃತ್ತಿ ತೆಗೆದುಕೊಂಡು ಮನೆಯಲ್ಲಿ ಇರಲಿ. ಚಿಕ್ಕನಗೌಡ್ರ ಜೊತೆ ಬೀಗತನ ಮಾಡಿಕೊಂಡು ಮನೆಯಲ್ಲಿ ಇರಲಿ ಎಂದರು.