ಬಳ್ಳಾರಿ : ಆಪ್ತ ಸಹಾಯಕ ಎನ್. ಅನಂತರಾಜು ನಿಧನಕ್ಕೆ ಬಳ್ಳಾರಿ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ ಅವರು ಕಂಬನಿ ಮಿಡಿದಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಶಾಸಕ ನಾಗೇಂದ್ರ ಅವರು, "ಕಳೆದ ಒಂದೂವರೆ ದಶಕಗಳಿಂದ ಅನಂತರಾಜು ನನ್ನ ಆಪ್ತ ಸಹಾಯಕರಾಗಿದ್ದರು. ನನ್ನ ಗೆಳೆಯನಂತೆ, ಸಹೋದರನಂತೆ ಬಾಂಧವ್ಯ ಹೊಂದಿದ್ದ ಅನಂತರಾಜು ನಮ್ಮನ್ನ ಅಗಲಿರೋದು ಬಹಳ ನೋವಿನ ಸಂಗತಿಯಾಗಿದೆ.
ನನ್ನ ಎಲ್ಲಾ ಗೆಲುವು ಮತ್ತು ಬೆಳವಣಿಗೆಗಳಲ್ಲಿ ಅನಂತರಾಜು ಪಾತ್ರ ಇದೆ. ನನ್ನ ಅತ್ಯಾಪ್ತನನ್ನು ಕಳೆದುಕೊಂಡ ದುಃಖ ನನ್ನಲ್ಲಿ ಮಡುಗಟ್ಟಿದೆ. ನಾನು ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಶಾಸಕನಾಗಿ ಎರಡು ಬಾರಿ ಆಯ್ಕೆಯಾದಾಗ ಅನಂತರಾಜು ನನ್ನೊಂದಿಗೆ ಇದ್ದರು. ಆ ಕ್ಷೇತ್ರಕ್ಕೆ ನಾನು ಮಾಡಿದ ಅಭಿವೃದ್ಧಿಯಲ್ಲಿ ಅನಂತರಾಜು ಪಾತ್ರ ಇದೆ.
ಅದೇ ರೀತಿ ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಯಲ್ಲೂ ಅನಂತರಾಜು ಪಾತ್ರ ಇದೆ. ನಾನು ಬೇರೆ ಕಾರ್ಯದ ನಿಮಿತ್ತ ಪರವೂರಿನಲ್ಲಿದ್ದಾಗ ಕ್ಷೇತ್ರದ ವ್ಯಾಪ್ತಿಯ ಜನರಿಗೆ ನನ್ನ ಪರವಾಗಿ ಸಹಾಯ ಮಾಡಿದ್ದಾರೆ" ಎಂದು ಸ್ಮರಿಸಿದ್ದಾರೆ ಶಾಸಕರು.
ಮೃತ ಅನಂತರಾಜು ಪತ್ನಿ, ಮೂವರು ಪುತ್ರಿಯರನ್ನು ಅಗಲಿದ್ದಾರೆ. ಅವರ ಕುಟುಂಬ ಸದಸ್ಯರಿಗೆ ಈ ನೋವು ಭರಿಸಿಕೊಳ್ಳುವ ಶಕ್ತಿಯನ್ನು ಆ ಭಗವಂತ ನೀಡಲಿ. ಅನಂತರಾಜು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹಾರೈಸಿ ನನ್ನ ಅಶ್ರುತರ್ಪಣ ಸಲ್ಲಿಸುವೆ ಎಂದು ಶಾಸಕ ನಾಗೇಂದ್ರ ಹೇಳಿದ್ದಾರೆ.