ಕೊಪ್ಪಳ: ಸಚಿವ ಉಮೇಶ ಕತ್ತಿ ಅವರು ಆ ರೀತಿ ಹೇಳಿದ್ದು ದುರ್ದೈವ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ.
ಕೊಪ್ಪಳದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅಕ್ಕಿ ಕೇಳಿದ್ದಕ್ಕೆ ಸಾಯಿರಿ ಎಂದು ಹೇಳಿದ ಸಚಿವ ಉಮೇಶ ಕತ್ತಿ ಅವರ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿ, ಅವರ ಬಗ್ಗೆ ನಾನೇನು ಹೇಳುವುದಿಲ್ಲ. ಆದರೆ ಅವರು ಆ ರೀತಿ ಹೇಳಬಾರದಿತ್ತು. ಹೇಳಿದ್ದು ದುರ್ದೈವ ಎಂದರು.
ಕೊರೊನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದೆ. ಜನರು ಜಾಗೃತಿಯಿಂದ ಇರಬೇಕು. ಸೋಂಕಿತರು ಹೋಂ ಐಸೋಲೇಷನ್ ಆಗುತ್ತಿದ್ದಾರೆ. ದೊಡ್ಡ ದೊಡ್ಡ ಮನೆಗಳಿದ್ದರೆ ಹೋಂ ಐಸೋಲೇಷನ್ ಆದರೆ ಸೋಂಕು ಹರಡುವುದಿಲ್ಲ. ಸಣ್ಣ ಮನೆಯಿದ್ದು ಕುಟುಂಬದಲ್ಲಿ ಬಹಳ ಜನರಿದ್ದರೆ ಹೋಂ ಐಸೋಲೇಷನ್ ಆದರೆ ಕುಟುಂಬದ ಉಳಿದವರಿಗೆ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಹೀಗಾಗಿ ಮನೆ ಸಣ್ಣದಿರುವ, ಜಾಸ್ತಿ ಕುಟುಂಬಸ್ಥರಿರುವ ಮನೆಯಲ್ಲಿ ಸೋಂಕು ಪತ್ತೆಯಾದರೆ ಅವರನ್ನು ಕೋವಿಡ್ ಕೇರ್ ಸೆಂಟರ್ಗೆ ದಾಖಲಿಸಬೇಕು ಎಂದರು.
ಜಿಲ್ಲೆಯಲ್ಲಿ ಆಕ್ಸಿಜನ್, ಬೆಡ್ ಕೊರತೆ ಇಲ್ಲ. ಯಾವುದೇ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ, ಸರ್ಕಾರ ಸಿದ್ದವಿದೆ. ಬೇರೆ ಬೇರೆ ಊರಿನಿಂದ ವಾಪಸ್ ಗ್ರಾಮಕ್ಕೆ ಬಂದಿರುವ ಜನರನ್ನು ಕೋವಿಡ್ ಟೆಸ್ಟ್ ಕಡ್ಡಾಯವಾಗಿ ಟೆಸ್ಟ್ ಮಾಡಿಸಲು ಗ್ರಾಮ ಪಂಚಾಯಿತಿ ಪಿಡಿಒಗಳಿಗೆ, ಆಶಾ ಕಾರ್ಯಕರ್ತೆಯರಿಗೆ ಸೂಚನೆ ನೀಡಲಾಗಿದೆ. ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕೊರೊನಾ ನಿಯಂತ್ರಣಕ್ಕೆ ಬೇಕಾದ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು.