ಮಂಗಳೂರು : ಲಾಕ್‌ಡೌನ್ ವೇಳೆ ಪಶ್ಚಿಮ ಬಂಗಾಲದ ಸಿಲಿಗುರಿಗೆ ಹೋಗಲು ಸಾಧ್ಯವಾಗದೆ ಇದ್ದ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳು ವಿಮಾನದ ಮೂಲಕ ಹುಟ್ಟೂರು ತಲುಪಿದ್ದಾರೆ.
ಮಂಗಳೂರಿನ ಡಾ.ಪಿ ದಯಾನಂದ ಪೈ-ಪಿ.ಸತೀಶ್ ಪೈ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದ್ವಿತೀಯ ಬಿಎಸ್‌ಡಬ್ಲ್ಯೂ ಪದವಿ ವ್ಯಾಸಂಗ ಮಾಡುತ್ತಿರುವ, ಮೂಲತಃ ಪಶ್ಚಿಮ ಬಂಗಾಳದ ಸಿಲಿಗುರಿ ಜಿಲ್ಲೆಯ ಹತ್ತು ವಿದ್ಯಾರ್ಥಿಗಳು ಹುಟ್ಟೂರಿಗೆ ಮರಳಲಾಗದೆ ಸಂಕಷ್ಟಕ್ಕೆ ಸಿಲುಕಿದ್ದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ರಾಜಶೇಖರ್ ಹೆಬ್ಬಾರ್ ಅವರು, ಉಪನ್ಯಾಸಕರ ಹಾಗೂ ಸ್ಥಳೀಯ ದಾನಿಗಳ ನೆರವಿನಿಂದ ಈ ವಿದ್ಯಾರ್ಥಿಗಳ ಪೋಷಣೆಗೆ ಬೆಂಬಲವಾಗಿ ನಿಂತರು. ವಸತಿ ಹಾಗೂ ಇನ್ನಿತರ ಮೂಲಸೌಕರ್ಯವನ್ನು ಒದಗಿಸಿದ ಪ್ರಾಂಶುಪಾಲರು, ಈ ವಿದ್ಯಾರ್ಥಿಗಳಿಗೆ ಧ್ಯೆರ್ಯ ತುಂಬಿ ಮಾನಸಿಕವಾಗಿಯೂ ಸಾಂತ್ವನ ನೀಡಿದ್ದರು. ವಿದ್ಯಾರ್ಥಿಗಳ ಪೋಷಕ ತಾರಕ್ ಅವರು ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಅವರ ಹುಟ್ಟೂರಿಗೆ ಮರಳಿಸುವ ಪ್ರಯತ್ನ ಮಾಡಿ ಏರ್ ಏಷ್ಯಾ ವಿಮಾನದ ಅಧಿಕಾರಿಗಳನ್ನು ಸಂಪರ್ಕಿಸಿ, ರಿಯಾಯಿತಿ ದರದಲ್ಲಿ ವಿಮಾನದ ಟಿಕೇಟ್‍ಗಳನ್ನು ಕಾಯ್ದಿರಿಸಿದರು.
ವಿಮಾನಯಾನದ ವೆಚ್ಚದ ಶೇ.50ರಷ್ಟು ಏರ್ ಏಷ್ಯಾ, ಶೇ.25ರಷ್ಟು ಪ್ರಾಂಶುಪಾಲರು ಹಾಗೂ ಶೇ.25ರಷ್ಟು ಅಲ್ಲಿನ ಎನ್‌ಜಿಒದಿಂದ ಭರಿಸಲಾಯಿತು. ಹೀಗೆ ಎಲ್ಲಾ ಪಶ್ಚಿಮ ಬಂಗಾಳದ ವಿದ್ಯಾರ್ಥಿಗಳನ್ನು ಜೂನ್ 19ರಂದು ಸುರಕ್ಷಿತವಾಗಿ ತಮ್ಮ ಗ್ರಾಮ ಸಿಲಿಗುರಿಗೆ ಕಳುಹಿಸಿಕೊಟ್ಟಿದ್ದಾರೆ. ಅಲ್ಲದೆ ವಿದ್ಯಾರ್ಥಿಗಳಿಗೆ ಪ್ರಯಾಣದ ವೇಳೆಯಲ್ಲಿ ಅವಶ್ಯವಿರುವ ಎಲ್ಲಾ ವೈದ್ಯಕೀಯ ತಪಾಸಣೆ ಹಾಗೂ ಪ್ರಮಾಣ ಪತ್ರ ಪಡೆಯುವ ಜವಾಬ್ದಾರಿಯನ್ನು ಕಾಲೇಜಿನ ಸಿಬ್ಬಂದಿ ನಾಗೇಂದ್ರ ಆಚಾರ್ಯವಹಿಸಿದ್ದರು.