ಕೋಲ್ಕತ್ತಾ: ಕಳೆದ ಕೆಲ ದಿನಗಳ ಹಿಂದೆ ಮೋದಿ ನೀಡಿದ್ದ ಸಂದರ್ಶನವೊಂದರಲ್ಲಿ ಪ್ರಧಾನಿ ಮೋದಿ, ಮಮತಾ ಬ್ಯಾನರ್ಜಿಯವರಿಂದ ಪ್ರತಿ ವರ್ಷ ಸಿಹಿ-ತಿಂಡಿ ಪಡೆದುಕೊಳ್ಳುವುದಾಗಿ ಹೇಳಿಕೆ ನೀಡಿದ್ದರು.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಇದೀಗ ಮಮತಾ ಬ್ಯಾನರ್ಜಿ ಆಕ್ರೋಶದಿಂದ ಮಾತನಾಡಿದ್ದಾರೆ. ಇನ್ಮುಂದೆ ಅವರಿಗೆ ಕಲ್ಲು-ಮಣ್ಣಿನಿಂದ ಕೂಡಿದ ಸಿಹಿ ತಿಂಡಿ ತಯಾರಿಸಿ ಕಳುಹಿಸುವೆ ಎಂದಿದ್ದಾರೆ.
ಅವರು ಪ್ರಧಾನಿಯಾದ ಬಳಿಕ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿರಲಿಲ್ಲ. ಆದರೆ ಲೋಕಸಭಾ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಮೇಲಿಂದ ಮೇಲೆ ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಕೇವಲ ವೋಟ್ ಕೇಳುವುದಕ್ಕೆ ಅವರು ಬರುತ್ತಿರುವುದು ಎಂದು ವಾಗ್ದಾಳಿ ನಡೆಸಿದರು. ವೋಟ್ ಪಡೆದುಕೊಳ್ಳುವುದರಲ್ಲಿ ಮಾತ್ರ ಅವರಿಗೆ ಪಶ್ಚಿಮ ಬಂಗಾಳದ ಜನತೆ ಬೇಕು, ಆದರೆ ಅಭಿವೃದ್ಧಿ ವಿಷಯದಲ್ಲಿ ಅವರು ಯಾವುದೇ ರೀತಿಯಲ್ಲೂ ಸಹಾಯ ಮಾಡಿಲ್ಲ ಎಂದಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಜತೆ ನಡೆಸಿದ್ದ ಸಂದರ್ಶನದಲ್ಲಿ ಪ್ರಧಾನಿ ಮೋದಿ, ತಮಗೆ ವಿಪಕ್ಷಗಳಲ್ಲೂ ಉತ್ತಮ ಸ್ನೇಹಿತರಿದ್ದು, ಮಮತಾ ಬ್ಯಾನರ್ಜಿ ಪ್ರತಿ ವರ್ಷ ಕುರ್ತಾ ಹಾಗೂ ಸಿಹಿ ತಿಂಡಿ ಕಳುಹಿಸುತ್ತಾರೆ ಎಂದು ಹೇಳಿದ್ದರು.