ಚಾಮರಾಜನಗರ: ಕಷಾಯ, ಆಯುರ್ವೇದದ ಹಬೆ ಬಳಿಕ ಗಡಿ ಜಿಲ್ಲೆಯ ಪೊಲೀಸರು ಈಗ ಕೊರೊನಾಗೆ ಗುದ್ದು ಕೊಡಲು ಸದ್ಗುರು ಜಗ್ಗಿ ವಾಸುದೇವ್ ಅವರ ಯೋಗದ ಮೊರೆ ಹೋಗಿದ್ದು, ನಿತ್ಯ ಯೋಗಾಭ್ಯಾಸ ಮಾಡುತ್ತಿದ್ದಾರೆ.
ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಮತ್ತು ಶ್ವಾಸಕೋಶದ ಕಾರ್ಯಕ್ಷಮತೆ ಉತ್ತಮ ಪಡಿಸಲು ಪೊಲೀಸರಿಗಾಗಿಯೇ ಸದ್ಗುರು ಅವರ ಈಶ ಫೌಂಡೇಶನ್ ಕಳೆದ 4 ದಿನಗಳಿಂದ ಉಚಿತ ವೆಬಿನಾರ್ ನಡೆಸುತ್ತಿದ್ದು, ಗಡಿ ಜಿಲ್ಲೆ ಪೊಲೀಸರು ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. ಜೊತೆಗೆ, ಹೇಳಿಕೊಟ್ಟ ಯೋಗಾಸನಗಳನ್ನು ಮಾಡುತ್ತಿದ್ದಾರೆ.
ಸಿಂಹಕ್ರಿಯಾ, ಈಶಕ್ರಿಯಾ, ಉಪ-ಯೋಗಗಳು, ರೋಗನಿರೋಧಕ ಶಕ್ತಿ ಹೆಚ್ಚಿಸಲಿರುವ ಆಹಾರಗಳ ಕುರಿತು ಪ್ರತಿ ಸಂಜೆ 1 ತಾಸು ಸೆಷನ್ ನಡೆಯುತ್ತಿದ್ದು, ಹನೂರು, ಕೊಳ್ಳೇಗಾಲ ಗ್ರಾಮಾಂತರ ಠಾಣೆ, ಟ್ರಾಫಿಕ್ ಠಾಣೆ, ಕೊಳ್ಳೇಗಾಲ ವೃತ್ತ ಕಚೇರಿಯಲ್ಲಿನ ಪೊಲೀಸ್ ಸಿಬ್ಬಂದಿ ವೆಬಿನಾರ್ನಲ್ಲಿ ಭಾಗವಹಿಸಿ ಹೇಳಿಕೊಟ್ಟ ಯೋಗಾಸನ ಮಾಡುತ್ತಿದ್ದಾರೆ.
ಸಿಂಹಕ್ರಿಯೆ, ತಿಳಿಸಿರುವ ಆಹಾರ ಪದ್ಧತಿಯನ್ನು ಪಾಲನೆ ಮಾಡುತ್ತಿದ್ದು, ಯೋಗಾಭ್ಯಾಸದ ಬಳಿಕ ಸಕಾರಾತ್ಮಕ ಪರಿಣಾಮ ಕಂಡುಬರುತ್ತಿದೆ. ಈಶಕ್ರಿಯೆಯು ಒತ್ತಡ ಕಡಿಮೆ ಮಾಡುತ್ತಿದ್ದು, ಚೆಕ್ ಪೋಸ್ಟ್ನಲ್ಲಿರುವ ಸಿಬ್ಬಂದಿ ಹೊರತುಪಡಿಸಿ ಇತರೆ ಸಿಬ್ಬಂದಿ ಸಕ್ರಿಯವಾಗಿ ವೆಬಿನಾರ್ನಲ್ಲಿ ಭಾಗವಹಿಸುತ್ತಿದ್ದಾರೆ. ಇದು ಬಹಳ ಉಪಯುಕ್ತವಾಗಿದೆ ಎಂದು ಕೊಳ್ಳೇಗಾಲ ಗ್ರಾಮಾಂತರ ಠಾಣೆ ಪಿಎಸ್ಐ ಅಶೋಕ್ ತಿಳಿಸಿದರು.