ಚಾಮರಾಜನಗರ: ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರಿಗೆ ದೂರವಾಣಿ ಕರೆ ಮಾಡಿ ಶಹಬ್ಬಾಸ್ ಗಿರಿ ನೀಡಿದ್ದಾರೆ.
ಸುತ್ತಮುತ್ತಲು ರೆಡ್ ಜೋನ್‌ಗಳಿದ್ದು ತಮಿಳುನಾಡು, ಕೇರಳದ ಗಡಿ ಹಂಚಿಕೊಂಡಿದ್ದರೂ ಇದುವರೆಗೂ ಜಿಲ್ಲೆಗೆ ಕೊರೊನಾ ಸೋಂಕು ತಗುಲದಂತೆ ಕಾಪಾಡಿಕೊಂಡಿರುವುದಕ್ಕೆ ಅಭಿನಂದಿಸಿದ್ದಾರೆ. ಇದರ ಜೊತೆಗೆ ಕೊರೊನಾ ವಾರಿಯರ್ಸ್ ಕಾರ್ಯಕ್ಕೆ ಸಲಾಂ ಎಂದಿದ್ದಾರೆ.
ಪ್ರತಿಯೊಂದು ಜಿಲ್ಲೆಗಳ ಮೇಲೂ ನಿಗಾ ಇಟ್ಟಿದ್ದು, ಕೊರೊನಾ ವೈರಸ್ ವಿರುದ್ಧ ಹೋರಾಡುವುದರಲ್ಲಿ ಜಿಲ್ಲೆ ಮಾದರಿಯಾಗಿದೆ. ಇದೇ ರೀತಿ ನಿಮ್ಮ ಹಾಗೂ ಸಿಬ್ಬಂದಿ ವರ್ಗದ ಶ್ರಮ ಮುಂದುವರೆಯಲಿ ಎಂದು ಬೆನ್ನು ತಟ್ಟಿದ್ದಾರೆ.
ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿದ್ದು ಪ್ರಶಂಸೆ, ಶ್ಲಾಘನೆ ಜಿಲ್ಲೆಯ ಜನರಿಗೆ ಸಲ್ಲಬೇಕು. ರಾಷ್ಟ್ರ ಮಟ್ಟದಲ್ಲಿ ಚಾಮರಾಜನಗರ ಸದ್ದು ಮಾಡಿದ್ದು, ಕೇಂದ್ರ ಸಚಿವರು ನನಗೆ ದೂರವಾಣಿ ಕರೆ ಮಾಡಿದ್ದು ಅಚ್ಚರಿ ಮತ್ತು ಸಂತಸ ತಂದಿದೆ ಎಂದು ತಿಳಿಸಿದರು.