ಚಿಕ್ಕಮಗಳೂರು: ಕಳೆದ ಎರಡು ತಿಂಗಳಿಂದ ಬಿಸಿಲಿನ ಧಗೆಗೆ ಕಂಗೆಟ್ಟಿದ್ದ ಮಲೆನಾಡಿನ ಜನರಿಗೆ ಎರಡು ದಿನಗಳಿಂದ ಸುರಿಯುತ್ತಿರೋ ಮಳೆ ಸಂತಸ ಮೂಡಿಸಿದೆ. ಮಲೆನಾಡಲ್ಲಿನ ವರುಣನ ಅಬ್ಬರ ಜೋರಾಗಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಿವೆ.
ಮಳೆಯ ವಿಳಂಬದಿಂದ ಕಂಗಾಲಾಗಿದ್ದ ರೈತರು ಈಗ ನಿಟ್ಟುಸಿರು ಬಿಟ್ಟಿದ್ದಾರೆ. ಜಿಲ್ಲೆಯ ತುಂಬ ಕೃಷಿ ಸಂಬಂಧಿ ಕೆಲಸಗಳು ಚುರುಕುಗೊಂಡಿವೆ. ಹೀಗೆ ಮುಂದುವರಿದಲ್ಲಿ ಬೆಳೆಯ ಫಸಲು ಚೆನ್ನಾಗಿ ಬರುವ ನಿರೀಕ್ಷೆ ಇದೆ ಎನ್ನುತ್ತಾರೆ ರೈತ ಸತೀಶ್ ಜೈನ್.
ಧರ್ಮಸ್ಥಳ, ಹೊರನಾಡು ಸೇರಿದಂತೆ ಪ್ರೇಕ್ಷಣಿಯ ಸ್ಥಳಗಳಿಗೆ ಬರುತ್ತಿರುವ ಜನರಿಗೆ ಸೂಕ್ತ ವ್ಯವಸ್ಥೆಯನ್ನು ಜಿಲ್ಲಾಡಳಿತ ಕಲ್ಪಿಸಬೇಕು ಎಂದು ಸ್ಥಳೀಯ ಕುಮಾರ್ ಮನವಿ ಮಾಡಿದರು.
ಚಿಕ್ಕಮಗಳೂರು, ಮೂಡಿಗೆರೆ, ಕೊಪ್ಪ, ಶೃಂಗೇರಿ ಹಾಗೂ ಎನ್.ಆರ್.ಪುರದಲ್ಲಿ ಬೆಳಗ್ಗೆಯಿಂದಲೂ ಕಪ್ಪನೆಯ ಕಾರ್ಮೋಡ ಕವಿದಿದೆ. ಅಲ್ಲಲ್ಲಿ ಬೃಹತ್ ಗಾತ್ರದ ಮರಗಳು ರಸ್ತೆಗುರುಳಿವೆ. ಇನ್ನೊಂದು ಕಡೆ ನಿಧಾನವಾಗಿ ನದಿಗಳ ಹರಿವಿನಲ್ಲಿಯೂ ಹೆಚ್ಚಳ ಕಂಡು ಬರುತ್ತಿದೆ. ಎನ್.ಆರ್.ಪುರದಲ್ಲಿ ಬೃಹತ್ ಮರವೊಂದು ರಸ್ತೆಗೆ ಉರುಳಿದ್ದರಿಂದ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು.
ಒಟ್ಟಾರೆ ಬಿರುಗಾಳಿ ಸಹಿತ ಸುರಿಯುತ್ತಿರುವ ಮಳೆಯಿಂದಾಗಿ ಮಂದಹಾಸ ಮೂಡಿದೆ.