ಲೋಹರಡಗಾ (ಜಾರ್ಖಂಡ್): ಮಾಟಮಂತ್ರ ಮಾಡುತ್ತಾಳೆ ಎಂಬ ಮೂಢನಂಬಿಕೆಯಿಂದ ಮಹಿಳೆಯೊಬ್ಬರನ್ನು ಇಡೀ ಗ್ರಾಮಸ್ಥರು ಸೇರಿ ಹತ್ಯೆಗೈದು ನಂತರ ಶವವನ್ನು ಬೆಟ್ಟದಿಂದ ಕೆಳಗೆಸೆದಿರುವ ಆತಂಕಕಾರಿ ಘಟನೆ ಜಾರ್ಖಂಡ್ನ ಲೋಹರಡಗಾ ಜಿಲ್ಲೆಯಲ್ಲಿ ನಡೆದಿದೆ.
ಇಲ್ಲಿನ ಸೆರೆಂಗಡಗ ಪೊಲೀಸ್ ಠಾಣೆ ವ್ಯಾಪ್ತಿಯ ಗಣೇಶಪುರದಲ್ಲಿ ಗ್ರಾಮಸ್ಥರು ಮಾಟಗಾತಿ ಎಂದು ಆರೋಪಿಸಿ ಮಹಿಳೆಯನ್ನು ಪಂಚಾಯಿತಿಗೆ ಕರೆ ತಂದಿದ್ದಾರೆ. ಈ ವೇಳೆ ಆಕೆ ಎಲ್ಲರೂ ಸೇರಿಕೊಂಡು ದೊಣ್ಣೆಗಳಿಂದ ಮನಬಂದಂತೆ ಥಳಿಸಿದ್ದಾರೆ. ಇದರಿಂದ ತೀವ್ರವಾಗಿ ಅಸ್ವಸ್ಥಗೊಂಡ ಮಹಿಳೆ ಕುಡಿಯಲು ನೀರು ಕೇಳಿದ್ದಾಳೆ. ಆದರೂ, ಯಾರೊಬ್ಬರೂ ಆಕೆಗೆ ತೊಟ್ಟು ನೀರು ಕೊಟ್ಟಿಲ್ಲ.
ಅಲ್ಲದೇ, ಆಕೆ ಜೀವನ್ಮರಣದ ಸ್ಥಿತಿಯಲ್ಲಿದ್ದಾಗಲೇ ಚೀಲದಲ್ಲಿ ಆಕೆಯನ್ನು ತುಂಬಿದ್ದಾರೆ. ನಂತರ ಅದೇ ಚೀಲದಲ್ಲಿ ಆಕೆಯನ್ನು ಹೊತ್ತೊಯ್ದು ಗ್ರಾಮದಿಂದ ಎರಡ್ಮೂರು ಕಿಲೋ ಮೀಟರ್ ದೂರದಲ್ಲಿರುವ ಬೆಟ್ಟದ ಕೆಳಗಿನ ಅರಣ್ಯಕ್ಕೆ ಎಸೆದಿದ್ದಾರೆ. ಬಳಿಕ ಘಟನೆಯ ಮಾಹಿತಿ ಅರಿತ ಪೊಲೀಸರು ಅರಣ್ಯದಲ್ಲಿ ಶೋಧ ಕಾರ್ಯಾಚರಣೆ ನಡೆಸಿ ಮಹಿಳೆಯ ಶವವನ್ನು ಹೊರತೆಗೆದಿದ್ದಾರೆ.
ಇದೀಗ ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಸುಮಾರು 35ಕ್ಕೂ ಹೆಚ್ಚು ಜನರನ್ನು ಬಂಧಿಸಿ, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಇತ್ತ, ಮಹಿಳೆಯ ಸಾವಿನ ಬಳಿಕ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಇದನ್ನೂ ಓದಿ: ಮದುವೆಗೆ ಮುಂಚೆಯೇ ಇಬ್ಬರಿಗೆ ತಲಾ ಒಂದು ಮಗು ಕೊಟ್ಟು, ಒಂದೇ ಮಂಟಪದಲ್ಲಿ ಮದುವೆಯಾದ!