ಚೆನ್ನೈ(ತಮಿಳುನಾಡು): ಪಿಎಸ್ಬಿ ಶಾಲಾ ಆಡಳಿತದ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ತಮಿಳುನಾಡು ಬಿಜೆಪಿ ಮುಖ್ಯಸ್ಥ ಎಲ್. ಮುರುಗನ್, ಸರ್ಕಾರಿ ಶಾಲೆಗಳಲ್ಲಿ ನಡೆಯುವ ಲೈಂಗಿಕ ದೌರ್ಜನ್ಯಗಳಿಗೆ ಶಿಕ್ಷಣ ಸಚಿವರನ್ನು ಹೊಣೆಗಾರರನ್ನಾಗಿ ಮಾಡಬಹುದೇ ಎಂದು ಪ್ರಶ್ನಿಸಿದ್ದಾರೆ.
ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 7 ವರ್ಷಗಳನ್ನು ಕಳೆದ ಮೋದಿ ಸರ್ಕಾರದ ಈ ದಿನವನ್ನು ರಾಷ್ಟ್ರವ್ಯಾಪಿ ಸೇವಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಪ್ರಧಾನಿ ಮೋದಿ ಏಳು ವರ್ಷಗಳಿಂದ ಉತ್ತಮವಾಗಿ ಆಡಳಿತ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರ ವಿವಿಧ ಸಾರ್ವಜನಿಕ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಆದರೆ, ಕೊರೊನಾ ತಡೆಗಟ್ಟುವ ಕ್ರಮಗಳನ್ನು ಡಿಎಂಕೆ ಸರ್ಕಾರ ಸರಿಯಾಗಿ ಜಾರಿಗೆ ತಂದಿಲ್ಲ. ಕಳೆದ ವಾರ, ಡಿಎಂಕೆ ಸರ್ಕಾರವು ಎರಡು ದಿನಗಳವರೆಗೆ ಲಾಕ್ಡೌನ್ ಸಡಿಲಗೊಳಿಸಿತು. ಹೀಗಾಗಿ ರಾಜ್ಯದ ಪ್ರತಿ ಮೂಲೆ ಮೂಲೆಯಲ್ಲಿ ಕೋವಿಡ್ ಹರಡಲು ಕಾರಣವಾಗಿದೆ ಎಂದು ಆರೋಪಿಸಿದರು.
ಪದ್ಮ ಶೇಷಾದ್ರಿ ಬಾಲ ಭವನ್ ಶಾಲೆಯ ವಿಷಯದ ಬಗ್ಗೆ ಮಾತನಾಡಿದ ಅವರು, ಈ ಲೈಂಗಿಕ ದೌರ್ಜನ್ಯದಲ್ಲಿ ಭಾಗಿಯಾಗಿರುವ ಯಾರಾದರೂ ಸರಿ, ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಶಾಲೆಯ ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೇಳುವುದಕ್ಕೆ ಸಮರ್ಥನೆ ಏನು? ಸರ್ಕಾರಿ ಶಾಲೆಗಳಲ್ಲಿನ ಲೈಂಗಿಕ ದೌರ್ಜನ್ಯಗಳಿಗೆ ಶಾಲಾ ಶಿಕ್ಷಣ ಸಚಿವರನ್ನು ಹೊಣೆಗಾರರನ್ನಾಗಿ ಮಾಡಬಹುದೇ? ಎಂದು ಸಚ್ಚರಿಯ ಪ್ರಶ್ನೆ ಹಾಕಿದ್ದಾರೆ.
ಡಿಎಂಕೆ ಕೊಯಿಮತ್ತೂರು ಜಿಲ್ಲೆಯನ್ನು ಮಾತ್ರ ನಿರ್ಲಕ್ಷಿಸುತ್ತಿದೆ ಎಂದು ನಮಗೆ ಅನಿಸುತ್ತದೆ. ಅದಕ್ಕಾಗಿಯೇ # gobackStalin ಸ್ಟಾಲಿನ್ ಟ್ವಿಟ್ಟರ್ ನಲ್ಲಿ ಟ್ರೆಂಡ್ ಆಗುತ್ತಿದೆ ಎಂದು ಮುರುಗನ್ ಹೇಳಿದರು.