ನವದೆಹಲಿ: ಉಜ್ಬೇಕಿಸ್ತಾನದಲ್ಲಿ ಮಕ್ಕಳಿಗೆ ಭಾರತದ ಔಷಧೀಯ ಸಂಸ್ಥೆ ಮರಿಯನ್ ಬಯೋಟೆಕ್ ತಯಾರಿಸಿರುವ ಎರಡು ಕೆಮ್ಮಿನ ಸಿರಪ್‌ಗಳನ್ನು ನೀಡಬಾರದು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಸೂಚಿಸಿದೆ. ನೋಯ್ಡಾ ಮೂಲದ ಮರಿಯನ್ ಬಯೋಟೆಕ್ ಪ್ರೈವೇಟ್ ಲಿಮಿಟೆಡ್ ತಯಾರಿಸಿರುವ ಅಬ್ರೊನಾಲ್ ಮತ್ತು ಡಾಕ್-1 ಮ್ಯಾಕ್ಸ್ ಕೆಮ್ಮು ಸಿರಪ್ ತೆಗೆದುಕೊಳ್ಳದಂತೆ ಹೇಳಿದೆ. ಇಲ್ಲಿಯವರೆಗೆ ಔಷಧೀಯ ಗುಣಮಟ್ಟ ಮತ್ತು ಸುರಕ್ಷತೆಗೆ ಸಂಬಂಧಿಸಿದಂತೆ ಈ ಸಂಸ್ಥೆಯು ಯಾವುದೇ ಖಾತ್ರಿಯನ್ನು ನೀಡಿಲ್ಲ ಎಂದು ತನ್ನ ವಿಶ್ವ ಆರೋಗ್ಯ ಸಂಸ್ಥೆ ಹೇಳಿಕೆಯಲ್ಲಿ ಉಲ್ಲೇಖಿಸಿದೆ.
ಮೇರಿಯನ್ ಬಯೋಟಿಕ್ ಕಂಪೆನಿಯ ಉತ್ಪಾದನಾ ಪರವಾನಗಿಯನ್ನು ಉತ್ತರ ಪ್ರದೇಶದ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಮಂಗಳವಾರ ಅಮಾನತುಗೊಳಿಸಿದ್ದಾಗಿ ನಗರದ ಡ್ರಗ್ ಇನ್ಸ್‌ಪೆಕ್ಟರ್ ತಿಳಿಸಿದ್ದಾರೆ. ಈ ಸಿರಪ್ಗಳ ಬಳಕೆಯು ವಿಶೇಷವಾಗಿ ಮಕ್ಕಳಲ್ಲಿ ಗಂಭೀರವಾದ ಗಾಯ ಅಥವಾ ಸಾವಿಗೂ ಕಾರಣವಾಗಬಹುದು. ಕಳೆದ ಡಿಸೆಂಬರ್ 22ರಂದು ಉಜ್ಬೇಕಿಸ್ತಾನ್ ಮೇರಿಯನ್ ಬಯೋಟೆಕ್ ಕಂಪನಿ ತಯಾರಿಸಿದ ಔಷಧಿಗಳನ್ನು ಸೇವಿಸಿ 18 ಮಕ್ಕಳು ಸಾವನ್ನಪ್ಪಿದ್ದರು.
ಇದನ್ನೂ ಓದಿ: ಪವಾಡದ ಶಸ್ತ್ರಚಿಕಿತ್ಸೆ: ಸೈನಿಕನ ಎದೆಯಿಂದ ಜೀವಂತ ಗ್ರೆನೇಡ್ ತೆಗದ ಉಕ್ರೇನಿಯನ್ ಡಾಕ್ಟರ್
ಸಿರಪ್ ಸೇವಿಸಿ ಮೃತಪಟ್ಟಿದ್ದ ಮಕ್ಕಳು: ಮಧ್ಯ ಏಷ್ಯಾ ರಾಷ್ಟ್ರವಾದ ಉಜ್ಬೇಕಿಸ್ತಾನದಲ್ಲಿ ಮರಿಯನ್ ಬಯೋಟೆಕ್ ತಯಾರಿಸಿದ ಡಾಕ್-1 ಮ್ಯಾಕ್ಸ್ ಕೆಮ್ಮಿನ ಸಿರಪ್ ಸೇವಿಸಿ 21 ಮಕ್ಕಳು ತೀವ್ರ ಉಸಿರಾಟದ ಸಮಸ್ಯೆಗೆ ಒಳಗಾಗಿದ್ದರು. ಅದರಲ್ಲಿ 18 ಮಕ್ಕಳು ಮೃತಪಟ್ಟಿದ್ದರು. ಈ ಮಕ್ಕಳು ಔಷಧಿಯನ್ನು 2 ರಿಂದ 7 ದಿನಗಳವರೆಗೆ ದಿನಕ್ಕೆ 3 ರಿಂದ 4 ಬಾರಿ, 2.5- 5 ಎಂಎಲ್ ತೆಗೆದುಕೊಂಡಿದ್ದರು. ಇದನ್ನು ಸೇವಿಸಿದ ಬಳಿಕ ಅವರ ಆರೋಗ್ಯ ಹದಗೆಟ್ಟು ಉಸಿರಾಟದ ತೊಂದರೆ ಅನುಭವಿಸಿ ಸಾವಿಗೀಡಾಗಿದ್ದರು.
ಕಂಪನಿ ವಿರುದ್ಧ ಕಠಿಣ ಕ್ರಮ: ಸಿರಪ್ ಸೇವಿಸಿ ಮಕ್ಕಳು ಮೃತಪಟ್ಟಿರುವ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯವು ಮರಿಯನ್ ಬಯೋಟೆಕ್‌ನ ಡಾಕ್-1 ಮ್ಯಾಕ್ಸ್ ಉತ್ಪಾದನೆಯನ್ನು ಇತ್ತೀಚೆಗೆ ನಿಷೇಧಿಸಿದೆ. ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (ಸಿಡಿಎಸ್‌ಸಿಒ) ಮತ್ತು ಯುಪಿ ಡ್ರಗ್ಸ್ ಕಂಟ್ರೋಲ್ ಜಂಟಿ ತಂಡವು ಮರಿಯನ್ ಬಯೋಟೆಕ್‌ನ ಉತ್ಪಾದನಾ ಘಟಕವನ್ನು ಪರಿಶೀಲಿಸಿದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ. ಮರಿಯನ್ ಬಯೋಟೆಕ್ ರಫ್ತಿನ ಪರವಾನಗಿ ಪಡೆದ ಬಳಿಕ ಡಾಕ್-1 ಮ್ಯಾಕ್ಸ್ ಕಾಗ್ ಮತ್ತು ಟ್ಯಾಬ್ಲೆಟ್‌ಗಳನ್ನು ತಯಾರಿಸಲು ಪ್ರಾರಂಭಿಸಿದೆ. ಅದು ಉತ್ತರ ಪ್ರದೇಶದ ಡ್ರಗ್ ಕಂಟ್ರೋಲರ್ ಪರವಾನಗಿ ಹೊಂದಿತ್ತು. ಅಲ್ಲದೇ, ಕೆಮ್ಮು ಸಿರಪ್ ಡಾಕ್-1 ಮ್ಯಾಕ್ಸ್ನಲ್ಲಿ ಕಲಬೆರಕೆ ಕಂಡುಬಂದಿತ್ತು. ಇವೆಲ್ಲದರ ಬಗ್ಗೆ ಸಿಡಿಎಸ್‌ಸಿಒ ಕೇಂದ್ರಕ್ಕೆ ವರದಿ ನೀಡಿತ್ತು. ಹೀಗಾಗಿ ಡಿಸೆಂಬರ್ 30 ರಂದು ನೋಯ್ಡಾ ಘಟಕದಲ್ಲಿ ಮರಿಯನ್ ಬಯೋಟೆಕ್‌ನ ಎಲ್ಲ ಉತ್ಪಾದನೆಗಳಿಗೆ ತಡೆ ನೀಡಲಾಗಿದೆ.
ಇದನ್ನೂ ಓದಿ: ಭಾರತದ ಕೆಮ್ಮಿನ ಸಿರಪ್ ನಿಂದ 18 ಮಕ್ಕಳ ಸಾವು ಪ್ರಕರಣ.. ಕಂಪನಿ ವಿರುದ್ಧ ಕೇಂದ್ರ ಸರ್ಕಾರದಿಂದ ಕ್ರಮ