ಮೆಹಬೂಬಾಬಾದ್: ಕಲ್ಯಾಣ ಮಂಟಪದಲ್ಲಿ ಸೇರಿದ್ದ ಸಂಬಂಧಿಕರು ಮತ್ತು ಬಂಧುಗಳು ಮದುವೆ ಖುಷಿಯಲ್ಲಿದ್ದರು. ಆದ್ರೆ, ಇದ್ದಕ್ಕಿದ್ದಂತೆ ಅಲ್ಲಿಗೆ ಪೊಲೀಸರು ಎಂಟ್ರಿ ಕೊಡ್ತಾರೆ. ಆ ಸಂದರ್ಭದಲ್ಲಿ ಮದುಮಗಳೇ ಬದಲಾಗಿರುವ ಘಟನೆ ನಡೆದಿದೆ. ಇಂಥದ್ದೊಂದು ವಿಚಿತ್ರ ಪ್ರಕರಣ ನಡೆದಿದ್ದು ಮರಿಪೆಡ್ ತಾಲೂಕಿನ ಗುಂಡೇಪೂಡಿ ಗ್ರಾಮದಲ್ಲಿ.
ಮದುವೆ ಸಂಭ್ರಮ
ಗುಂಡೇಪೂಡಿ ನಿವಾಸಿಯ ಯುವಕನಿಗೆ ಕುರುವಿ ತಾಲೂಕಿನ ಕಾಂಪೆಲ್ಲಿಗೆ ಸೇರಿದ ಯುವತಿಯೊಂದಿಗೆ ಮದುವೆ ನಿಶ್ಚಯವಾಗಿತ್ತು. ಹಿರಿಯರ ನಿಶ್ಚಯದಂತೆ ಮದುವೆಗೆ ಸಕಲ ಸಿದ್ಧತೆಯೂ ನಡೆದಿತ್ತು.
ಪೊಲೀಸರ ಪ್ರವೇಶ
ಮದುವೆ ಮನೆಯಲ್ಲಿ ಎಲ್ಲರೂ ಸಂಭ್ರಮದಲ್ಲಿದ್ದಾಗ ದಿಢೀರ್ ಆಗಿ ಕಲ್ಯಾಣ ಮಂಟಪದೊಳಗ ಪೊಲೀಸರು ಆಗಮಿಸಿದ್ದಾರೆ. ಪೊಲೀಸರು ಎಂಟ್ರಿ ಕೊಟ್ಟಿರುವುದರಿಂದ ಅರೆಕ್ಷಣ ಎಲ್ಲರೂ ದಿಗ್ಭ್ರಮೆಗೊಂಡರು.
ಶಾಕ್ ಕೊಟ್ಟ ವಧು
ಕಲ್ಯಾಣ ಮಂಟಪಕ್ಕೆ ಪೊಲೀಸರು ಎಂಟ್ರಿ ಕೊಡುವುದಕ್ಕೆ ಬೇರಾರೂ ಅಲ್ಲ ಸ್ವತ: ಮದುಮಗಳು! ಹೌದು, ಮದುಮಗಳು ಪೊಲೀಸರಿಗೆ ಫೋನ್ ಮಾಡಿ, ನನಗೆ ಈ ಮದುವೆ ಇಷ್ಟವಿಲ್ಲ. ಈ ವಿವಾಹವನ್ನು ಹೇಗಾದ್ರು ತಡೆಯಿರಿ ಎಂದು ಹೇಳಿದ್ದಾಳೆ. ಹೀಗಾಗಿ ಪೊಲೀಸರು ಕಲ್ಯಾಣ ಮಂಟಪಕ್ಕೆ ಬಂದು ನಡೆಯಬೇಕಾಗಿದ್ದ ಮದುವೆಯನ್ನು ನಿಲ್ಲಿಸಿದ್ದಾರೆ.
ಲವ್ ಮ್ಯಾಟ್ರು
ಯುವತಿ ಮತ್ತೊಬ್ಬ ಯುವಕನನ್ನು ಪ್ರೀತಿಸುತ್ತಿದ್ದಳು. ಹೀಗಾಗಿ ಈ ಮದುವೆ ಮಾಡಿಕೊಳ್ಳಲು ಇಷ್ಟವಿಲ್ಲದೇ ಪೊಲೀಸರಿಗೆ ಫೋನ್ ಮಾಡಿದ್ದಾಳಂತೆ. ಯುವತಿಗೆ ಅಲ್ಲಿದ್ದ ಹಿರಿಯರೆಲ್ಲರೂ ಬುದ್ಧಿಮಾತು ಹೇಳಿದ್ರೂ ಆಕೆ ಕೇಳಲೇ ಇಲ್ಲ. ಬಳಿಕ ಆಕೆಯನ್ನು ಪೊಲೀಸ್ ಕೌನ್ಸಲಿಂಗ್ ನಿಮಿತ್ತ ಸಖಿ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಮತ್ತು ಎಸ್ಐ ಅಶೋಕ್ ತಿಳಿಸಿದರು.
ಮದುವೆಗೆ ಬಂದಿದ್ದ ಯುವತಿಯೇ ಆದ್ಲು ಮದುಮಗಳು!
ಈ ಮದುವೆ ನಿಂತಿದ್ದು ತಮಗೆ ಅವಮಾನ ಎಂದು ತಿಳಿದ ಗಂಡಿನ ಕುಟುಂಬಸ್ಥರು ಕಾರ್ಯಕ್ರಮಕ್ಕೆ ಬಂದಿದ್ದ ಸಮೀಪದ ಬಂಧುಗಳ ಮಗಳೊಬ್ಬಳ ಜೊತೆ ಮದುವೆ ಮಾಡಿ ಮುಗಿಸಿದರು.!