ನವದೆಹಲಿ: ಕೇಂದ್ರ ಸರ್ಕಾರ ಪ್ರಾದೇಶಿಕ ಭಾಷೆಗಳನ್ನು ಕಡೆಗಣಿಸುತ್ತ ಹಿಂದಿಯನ್ನು ಹೇರಿಕೆ ಮಾಡುತ್ತಿದೆ ಎಂಬ ಆರೋಪಗಳು ರಾಜಕೀಯ ನಾಯಕರಿಂದ ಕೇಳಿಬರುತ್ತಲೇ ಇವೆ. ಈ ಮಧ್ಯೆ ಮಾತೃ ಭಾಷೆಯ ಕುರಿತು ಕೀಳರಿಮೆ ಬೇಡ. ದೇಶದ ಯಾವುದೇ ಒಂದು ಭಾಷೆ ನಾಶವಾಗಲು ಬಿಡಬೇಡಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ದೇಶದ ಜನರಿಗೆ ಕರೆ ನೀಡಿದ್ದಾರೆ.
ದೆಹಲಿಯ ಸರ್ದಾರ್ ಪಟೇಲ್ ಶಾಲೆಯಲ್ಲಿ ನಡೆದ ಭಾರತದ ಮೊದಲ ಗೃಹ ಸಚಿವ ಹಾಗೂ ಉಕ್ಕಿನ ಮನುಷ್ಯನ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 147ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ನೂರಾರು ಭಾಷೆಗಳಿವೆ. ಯಾವುದೇ ಭಾಷೆ ನಾಶವಾಗಲು ಬಿಡುವುದಿಲ್ಲ ಎಂದು ಭಾರತೀಯರಾದ ನಾವು ನಿರ್ಧರಿಸಬೇಕು ಎಂದರು.
ಇದನ್ನೂ ಓದಿ: ನಮ್ಮ ಬೆಂಬಲ ಕೊಂಕಣಿಗೆ: ಕಾರವಾರದಲ್ಲಿ ಮತ್ತೆ ಭಾಷಾ ವಿವಾದದ ಕಿಡಿ ಹೊತ್ತಿಸಿದ ಮಾಜಿ ಸಚಿವ ಅಸ್ನೋಟಿಕರ್
ಯಾವುದೇ ಭಾಷೆಯ ಕಲಿಕೆಗೆ ನಾನು ವಿರೋಧಿಯಲ್ಲ ಎಂದು ಸ್ಪಷ್ಟಪಡಿಸಿದ ಶಾ, ಇಂಗ್ಲಿಷ್, ಜರ್ಮನ್, ರಷ್ಯನ್ ಅಥವಾ ಫ್ರೆಂಚ್ ಕಲಿಯಬಹುದು. ಅದರಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೆ ನಿಮ್ಮ ಸ್ವಂತ ಭಾಷೆಯನ್ನು ಮರೆಯಬೇಡಿ. ಭಾಷೆಯು ಸಾಮರ್ಥ್ಯದ ಸೂಚಕವಲ್ಲ, ಸಾಮರ್ಥ್ಯವು ನಿಮ್ಮ ಭಾಷೆಯಿಂದ ವ್ಯಕ್ತವಾಗುತ್ತದೆ. ನಿಮಗೆ ಸಾಮರ್ಥ್ಯವಿದ್ದರೆ, ನೀವು ನಿಮ್ಮ ಸ್ವಂತ ಭಾಷೆಯಲ್ಲಿ ಅಥವಾ ಬೇರೆ ಯಾವುದೇ ಭಾಷೆಯಲ್ಲಿ ಮಾತನಾಡಿದರೂ ಜಗತ್ತು ನಿಮ್ಮ ಮಾತನ್ನು ಕೇಳಬೇಕಾಗುತ್ತದೆ. ಮಾತೃ ಭಾಷೆಯ ಕುರಿತು ಕೀಳರಿಮೆ ಬೇಡ. ಯಾರೂ ತಮ್ಮ ಸ್ವಂತ ಭಾಷೆಯನ್ನು ಬಿಟ್ಟು ಹೋಗಬೇಡಿ ಎಂದು ಕರೆ ನೀಡಿದರು. ಜೊತೆಗೆ ಶಿಕ್ಷಕರು ಮಕ್ಕಳೊಂದಿಗೆ ಅವರ ಮಾತೃಭಾಷೆಯಲ್ಲೇ ಮಾತನಾಡುವಂತೆ ಮನವಿ ಮಾಡಿದರು.
ಇದನ್ನೂ ಓದಿ: ಹಿಂದಿ ಹೇರಿಕೆ ಬಗ್ಗೆ ಜೆಡಿಎಸ್ ಶಾಸಕರಿಂದ ಸದನದಲ್ಲಿ ಗದ್ದಲ: ಇದೇನು ಜಾತ್ರೆನಾ, ಸಂತೆನಾ?- ಗರಂ ಆದ ಸ್ಪೀಕರ್
ನಾವು ನಮ್ಮ ಮಾತೃಭಾಷೆಯನ್ನು ಜೀವಂತವಾಗಿಡಬೇಕು ಮತ್ತು ಅದನ್ನು ಮುಂದುವರಿಸಬೇಕು. ಭಾಷೆಯ ಕೀಳರಿಮೆಯ ತಡೆಗೋಡೆ ಒಡೆಯುವ ಜವಾಬ್ದಾರಿ ಯುವ ಸಮುದಾಯದ ಮೇಲಿದೆ. ಯುವ ಜನರು ಮಾತೃಭಾಷೆಯನ್ನು ರಕ್ಷಿಸಿ ಮತ್ತು ಮುನ್ನಡೆಸಬೇಕು ಎಂದು ಕೇಂದ್ರ ಗೃಹ ಸಚಿವರು ಹೇಳಿದರು.