ಕಾನ್ಪುರ (ಉತ್ತರ ಪ್ರದೇಶ): 1857ರ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡಿದ್ದ ಉತ್ತರ ಪ್ರದೇಶದ ಕಾನ್ಪುರ ಮೂಲದ ಸೈನಿಕ ಆಲಂ ಬೇಗ್ ಅವರ ತಲೆಬುರುಡೆಯನ್ನು ಬ್ರಿಟನ್ನಿಂದ 166 ವರ್ಷಗಳ ನಂತರ ತವರು ರಾಷ್ಟ್ರಕ್ಕೆ ಮರಳಿ ತರಲಾಗಿದೆ. ಇತಿಹಾಸಕಾರರ ಪ್ರಯತ್ನದಿಂದ ಭಾರತಕ್ಕೆ ತಲೆಬುರುಡೆ ಬಂದಿದ್ದು, ಪಂಜಾಬ್ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಅಲ್ಲಿಂದ ದೆಹಲಿಯಲ್ಲಿ ನೆಲೆಯಲ್ಲಿರುವ ಆಲಂ ಬೇಗ್ ಕುಟುಂಬಸ್ಥರಿಗೆ ಅದನ್ನು ತಲುಪಿಸಲಾಗುತ್ತದೆ.
46ನೇ ಬೆಂಗಾಲ್ ರೆಜಿಮೆಂಟ್ಗೆ ಸೇರಿದ ಪದಾತಿ ದಳದ ಪೇದೆಯಾಗಿದ್ದ ಆಲಂ ಬೇಗ್ ಅವರು ಸಿಪಾಯಿ ದಂಗೆ ಎಂದು ಕರೆಯಲಾಗುವ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಸಂದರ್ಭದಲ್ಲಿ ದಂಗೆ ಎದ್ದಿದ್ದರು. ಈ ವೇಳೆ ಮೂವರನ್ನು ಹತ್ಯೆ ಮಾಡಿದ ಆರೋಪದ ಮೇಲೆ ಆಲಂ ಬೇಗ್ ಅವರನ್ನು ಗಲ್ಲಿಗೇರಿಸಲಾಗಿತ್ತು. ನಂತರ ಅವರ ತಲೆಬುರುಡೆಯನ್ನು ಬ್ರಿಟನ್ನಲ್ಲಿ ಅನೇಕ ವರ್ಷಗಳ ಕಾಲ ಯುದ್ಧ ಟ್ರೋಫಿ ಆಗಿ ಇರಿಸಲಾಗಿತ್ತು. ಇದರ ನಡುವೆ 1963ರಲ್ಲಿ ಲಂಡನ್ನಲ್ಲಿ ನೆಲೆಸಿದ್ದ ದಂಪತಿಯೊಬ್ಬರು ಲಂಡನ್ನ ಪಬ್ನಲ್ಲಿ ಆಲಂ ಬೇಗ್ ತಲೆಬುರುಡೆಯನ್ನು ಗಮನಿಸಿದ್ದರು.
![ಸೈನಿಕ ಆಲಂ ಬೇಗ್ ತಲೆಬುರುಡೆ](https://etvbharatimages.akamaized.net/etvbharat/prod-images/05-08-2023/19190891_thu11.jpg)
ಅಲ್ಲದೇ, ಈ ದಂಪತಿ ತಲೆಬುರುಡೆ ಪಡೆಯುವ ಇಚ್ಛೆ ವ್ಯಕ್ತಪಡಿಸಿದ್ದರು. ಆಗ ತಲೆಬುರುಡೆಯ ಕಣ್ಣಿನ ರಂಧ್ರಗಳಲ್ಲಿ ಪತ್ರವೊಂದು ದೊರೆತಿತ್ತು. ನಂತರ ಬ್ರಿಟನ್ನ ಇತಿಹಾಸಕಾರ ಪ್ರೊ. ಎಕೆ ವ್ನಾಗ್ನರ್ ಅವರನ್ನು ದಂಪತಿ ಸಂಪರ್ಕಿಸಿದ್ದರು. ಆ ಪತ್ರದಲ್ಲಿ ಸೈನಿಕ ಆಲಂ ಬೇಗ್ ಕುರಿತು ಸಂಪೂರ್ಣ ಮಾಹಿತಿಯನ್ನು ಉಲ್ಲೇಖಿಸಲಾಗಿತ್ತು. ಈ ತಲೆಬುರುಡೆ ಕುರಿತು ಸಂಶೋಧನೆ ನಡೆಸಿದ್ದ ಇತಿಹಾಸಕಾರರು ಅದು ಆಲಂ ಬೇಗ್ ಅವರದ್ದೇ ಎಂದು ಪ್ರತಿಪಾದಿಸಿದ್ದರು.
ಈ ಸಂದರ್ಭದಲ್ಲಿ ಚಂಡೀಗಢ ವಿಶ್ವವಿದ್ಯಾಲಯದ ಪ್ರೊ. ಜೆ ಎಸ್ ಸೆಹ್ರಾವತ್ ಅವರು ತಲೆಬುರುಡೆ ಕುರಿತು ಕೇಂದ್ರ ಸರ್ಕಾರ ಮತ್ತು ಬ್ರಿಟಿಷ್ ಸರ್ಕಾರ ಹಾಗೂ ಎಕೆ ವ್ಯಾಗ್ನರ್ ಅವರನ್ನು ಸಂಪರ್ಕಿಸಿದ್ದರು. ಇದು ತಲೆಬುರುಡೆಯನ್ನು ಭಾರತಕ್ಕೆ ತರುವ ದಾರಿಯನ್ನು ಸುಗಮ ಮಾಡಿತ್ತು. ಬಳಿಕ ತಲೆಬುರುಡೆಯನ್ನು ಪ್ರೊ. ಸೆಹ್ರಾವತ್ ಅವರಿಗೆ ವ್ಯಾಗ್ನರ್ ಹಸ್ತಾಂತರ ಮಾಡಿದ್ದರು. ಕಳೆದ ವಾರವಷ್ಟೇ ಇದು ಭಾರತಕ್ಕೆ ತಲುಪಿದೆ. ಈ ತಲೆಬುರುಡೆ ಕುರಿತು ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಜ್ಞಾನೇಶ್ವರ್ ಚೌಬೆ ಕೂಡ ಅಧ್ಯಯನ ನಡೆಸಲಿದ್ದಾರೆ.
![ತಲೆಬುರುಡೆಯ ಕಣ್ಣಿನ ರಂಧ್ರಗಳಲ್ಲಿ ದೊರೆತ ಪತ್ರ](https://etvbharatimages.akamaized.net/etvbharat/prod-images/05-08-2023/19190891_thum1.jpg)
2014ರ ಮಾರ್ಚ್ನಲ್ಲಿ ಅಜ್ನಾಲಾದಲ್ಲಿ ಪತ್ತೆಯಾದ 200ಕ್ಕೂ ಹೆಚ್ಚು ತಲೆಬುರುಡೆಗಳ ಮೇಲೆ ಸಂಶೋಧನೆ ನಡೆಸಿರುವ ಜ್ಞಾನೇಶ್ವರ್ ಚೌಬೆ, ಈಗ ಆಲಂ ಬೇಗ್ ತಲೆಬುರುಡೆ ಭಾರತಕ್ಕೆ ತಲುಪಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಈ ತಲೆಬುರುಡೆಯನ್ನು ಮೊದಲು ಅವರ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗುತ್ತದೆ. ಬಳಿಕ ಹೆಚ್ಚಿನ ಅಧ್ಯಯನ ಮಾಡಿ ನಂತರ ಸಮಾಧಿ ಮಾಡಲಾಗುವುದು ಎಂದು ಜ್ಞಾನೇಶ್ವರ್ ಚೌಬೆ ತಿಳಿಸಿದ್ದಾರೆ.
ಇದನ್ನೂ ಓದಿ: ಬೆಳಗಾವಿ: ದೂಧಗಂಗಾ ನದಿ ಸಮೀಪ ಮಾನವ ತಲೆಬುರುಡೆಗಳು ಪತ್ತೆ