ಪಾಟ್ನಾ(ಬಿಹಾರ): 2020ನೇ ಸಾಲಿನ ಯುಪಿಎಸ್ಸಿ ಅಂತಿಮ ಫಲಿತಾಂಶ ಪ್ರಕಟಗೊಂಡಿದ್ದು, ಅನೇಕ ಪ್ರತಿಭೆಗಳು ಪಾಸ್ ಆಗಿದ್ದು, ಇದೀಗ ಕೇಂದ್ರದ ವಿವಿಧ ಇಲಾಖೆಗಳಲ್ಲಿ ಹುದ್ದೆ ಅಲಂಕರಿಸಲು ಸಜ್ಜುಗೊಂಡಿದ್ದಾರೆ. ನಿನ್ನೆ ಪ್ರಕಟಗೊಂಡಿರುವ ಫೈನಲ್ ರಿಸಲ್ಟ್ನ ಲಿಸ್ಟ್ನಲ್ಲಿ ಸೈಕಲ್ ಮೇಲೆ ಬಟ್ಟೆ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನ ಮಗನು ಸೇರಿಕೊಂಡಿದ್ದಾನೆ.
ಕಿಶನ್ಗಂಜ್ನಗರದ ಕಾಲೋನಿವೊಂದರಲ್ಲಿ ವಾಸವಾಗಿರುವ ಅನಿಲ್ ಬೋಸಾಕ್ ಇದೀಗ ಯುಪಿಎಸ್ಸಿ ಫೈನಲ್ ಫಲಿತಾಂಶದಲ್ಲಿ 45ನೇ ಸ್ಥಾನ ಪಡೆದುಕೊಂಡಿದ್ದು, ಡಿಸಿ ಆಗುವ ತವಕದಲ್ಲಿದ್ದಾರೆ. 2019ರಲ್ಲಿನ UPSC ಪರೀಕ್ಷೆಯಲ್ಲಿ 616ನೇ ಸ್ಥಾನ ಪಡೆದುಕೊಂಡಿದ್ದ ಅನಿಲ್, ಇದರಿಂದ ತೃಪ್ತರಾಗಿರಲಿಲ್ಲ.
2020ನೇ ಸಾಲಿನ ಪರೀಕ್ಷೆಯಲ್ಲಿ ಮತ್ತೊಮ್ಮೆ ಭಾಗಿಯಾಗಿ, ತೇರ್ಗಡೆಯಾಗಿದ್ದು, 45ನೇ ಸ್ಥಾನಗಳಿಸಿದ್ದಾರೆ. ಅನಿಲ್ ಅವರ ತಂದೆ ಸಂಜಯ್ ಬೋಸಾಕ್ ಸೈಕಲ್ ಮೇಲೆ ಹಳ್ಳಿ ಹಳ್ಳಿಗೆ ತೆರಳಿ ಬಟ್ಟೆ ಮಾರಾಟ ಮಾಡುತ್ತಿದ್ದರು. ನಾಲ್ವರು ಸಹೋದರರಲ್ಲಿ ಅನಿಲ್ ಎರಡನೇಯವನಾಗಿದ್ದು, 2014ರಲ್ಲಿ ಐಐಟಿ ದೆಹಲಿಯಲ್ಲಿ ಸಿವಿಲ್ ಇಂಜಿನಿಯರಿಂಗ್ ಪಡೆದುಕೊಂಡಿದ್ದಾರೆ.
ಇದನ್ನೂ ಓದಿರಿ: ಅಕ್ಕನ ಹಾದಿಯಲ್ಲಿ ತಂಗಿ..UPSCಯಲ್ಲಿ 15ನೇ ಸ್ಥಾನ ಪಡೆದ IAS ಟಾಪರ್ ಟೀನಾ ಡಾಬಿ ಸಹೋದರಿ!
8ನೇ ತರಗತಿವರೆಗೆ ಕಿಶನ್ಗಂಜ್ನ ಶಾಲೆಯಲ್ಲಿ ಓದಿದ್ದ ಅನಿಲ್, 2011ರಲ್ಲಿ ಪಬ್ಲಿಕ್ ಸ್ಕೂಲ್ನಿಂದ ಮೆಟ್ರಿಕ್ಯುಲೇಷನ್, ತದನಂತರ ಮಾಧ್ಯಮಿಕ ಶಾಲೆ ಕಿಶನ್ಗಂಜ್ನಿಂದ 12ನೇ ತರಗತಿ ವ್ಯಾಸಂಗ ಮಾಡಿದ್ದರು. ಆರ್ಥಿಕ ಸಂಕಷ್ಟದ ಹೊರತಾಗಿ ಕೂಡ ಮಗನಿಗೆ ಉತ್ತಮ ಶಿಕ್ಷಣ ನೀಡುವಲ್ಲಿ ಕುಟುಂಬ ಹಿಂದೆ ಬಿದ್ದಿರಲಿಲ್ಲ.
2018ರಲ್ಲಿ ದೆಹಲಿ IITಯಿಂದ ಪದವಿಧರನಾಗಿ ಹೊರಹೊಮ್ಮಿದ ಅನಿಲ್, ಮೂರನೇ ಪ್ರಯತ್ನದಲ್ಲಿ ಯುಪಿಎಸ್ಸಿ ಪರೀಕ್ಷೆ ಪಾಸ್ ಮಾಡಿದ್ದಾರೆ. 2020ನೇ ಸಾಲಿನ ಯುಪಿಎಸ್ಸಿ ಪರೀಕ್ಷೆಯ ಫೈನಲ್ ಫಲಿತಾಂಶದಲ್ಲಿ ಒಟ್ಟು 761 ಅಭ್ಯರ್ಥಿಗಳು ರ್‍ಯಾಂಕ್ ಪಡೆದುಕೊಂಡಿದ್ದು, 545 ಪುರುಷರು ಹಾಗೂ 216 ಮಹಿಳೆಯರು ಇದ್ದಾರೆ. ರ್ಯಾಂಕ್ನ ಮೊದಲ 25 ಸ್ಥಾನ ಪಡೆದವರಲ್ಲಿ 13 ಪುರುಷರು ಹಾಗೂ 12 ಮಹಿಳಾ ಅಭ್ಯರ್ಥಿಗಳಿದ್ದಾರೆ.