ನವದೆಹಲಿ: ಉಕ್ರೇನ್-ರಷ್ಯಾ ನಡುವಿನ ಬಿಕ್ಕಟ್ಟಿನಿಂದಾಗಿ ಅಲ್ಲಿ ವಿದ್ಯಾಭ್ಯಾಸಕ್ಕಾಗಿ ತೆರಳಿರುವ ಭಾರತೀಯ ವಿದ್ಯಾರ್ಥಿಗಳು ತೊಂದರೆಗೊಳಗಾಗಿದ್ದು, ಅವರನ್ನ ಸುರಕ್ಷಿತವಾಗಿ ಕರೆತರುವ ಕೆಲಸದಲ್ಲಿ ಕೇಂದ್ರ ಸರ್ಕಾರ ಮಗ್ನವಾಗಿದೆ. ಇದೇ ವಿಚಾರವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾಧ್ಯಮಗೋಷ್ಟಿ ನಡೆಸಿ ಮಹತ್ವದ ಮಾಹಿತಿ ನೀಡಿದರು.
ಕಳೆದ 24 ಗಂಟೆಗಳಲ್ಲಿ 15 ವಿಮಾನಗಳಲ್ಲಿ 2,900 ಭಾರತೀಯರು ತಾಯ್ನಾಡಿಗೆ ವಾಪಸ್ ಆಗಿದ್ದು, ಇಲ್ಲಿಯವರೆಗೆ 13,300 ಜನರನ್ನ ಸುರಕ್ಷಿತವಾಗಿ ಕರೆತರಲಾಗಿದೆ ಎಂದರು. ಮುಂದಿನ 24 ಗಂಟೆಯಲ್ಲಿ ಉಕ್ರೇನ್ನಿಂದ ಭಾರತಕ್ಕೆ 13 ವಿಮಾನಗಳು ವಾಪಸ್ ಆಗಲಿದ್ದು, ಇದರಲ್ಲಿ ಭಾರತೀಯ ವಾಯುಪಡೆಯ ಮೂರು ವಿಮಾನಗಳು ಸಹ ಸೇರಿಕೊಂಡಿವೆ ಎಂಬ ಮಾಹಿತಿ ಹಂಚಿಕೊಂಡರು.
ಜನವರಿ ತಿಂಗಳಿಂದಲೂ ಉಕ್ರೇನ್-ರಷ್ಯಾ ನಡುವಿನ ಬಿಕ್ಕಟ್ಟಿನ ಮೇಲೆ ತೀವ್ರ ನಿಗಾ ವಹಿಸಲಾಗಿದ್ದು, ಫೆ. 15ರಂದು ನಾವು ಮೊದಲ ಪ್ರಕಟಣೆ ಹೊರಡಿಸಿದ್ದೆವು. ರಷ್ಯಾ ಭಾಷೆ ಮಾತನಾಡುವ ನಾಲ್ಕು ತಂಡಗಳನ್ನ ಉಕ್ರೇನ್ನ ಹತ್ತಿರದ ದೇಶಗಳಿಗೆ ಕಳುಹಿಸಿದ್ದು, ಭಾರತೀಯರ ರಕ್ಷಣೆಯಲ್ಲಿ ಭಾಗಿಯಾಗುವಂತೆ ಸೂಚನೆ ನೀಡಿದ್ದೆವು. ಮಾರ್ಚ್ 4ರ ವೇಳೆಗೆ ಉಕ್ರೇನ್ನಿಂದ 16,000 ನಾಗರಿಕರನ್ನ ವಾಪಸ್ ಕರೆತರುವಲ್ಲಿ ಯಶಸ್ವಿಯಾಗಿದ್ದೇವೆಂದು ಗೃಹ ಸಚಿವ ಅಮಿತ್ ಶಾ ಅಂಕಿ-ಅಂಶ ತಿಳಿಸಿದರು.
ಇಂದು ಹಂಗೇರಿ, ರೊಮೇನಿಯಾ ಹಾಗೂ ಸ್ಲೋವಾಕಿಯಾ ಹಾಗೂ ಪೋಲೆಂಡ್ನಿಂದ ವಿದ್ಯಾರ್ಥಿಗಳನ್ನ ಹೊತ್ತು ವಿಮಾನಗಳು ಆಗಮಿಸಿದ್ದು, ನಾಳೆ ಬುಡಾಪೆಸ್ಟ್, ಕೊಸಿಸ್, ರ್ಜೆಸ್ಜೋವ್ ಮತ್ತು ಬುಕಾರೆಸ್ಟ್ನಿಂದ 2,200ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ವಾಪಸ್ ಬರಲಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.
ಪಂಚರಾಜ್ಯ ಗೆಲ್ಲುವ ವಿಶ್ವಾಸ: ಉತ್ತರ ಪ್ರದೇಶ, ಗೋವಾ, ಪಂಜಾಬ್, ಮಣಿಪುರ ಹಾಗೂ ಉತ್ತರಾಖಂಡ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಭರ್ಜರಿಯಾಗಿ ಗೆಲುವು ದಾಖಲು ಮಾಡಿ ಮತ್ತೊಂದು ಅವಧಿಗೆ ಸರ್ಕಾರ ರಚನೆ ಮಾಡಲಿದೆ ಎಂಬ ವಿಶ್ವಾಸವನ್ನು ಅಮಿತ್ ಶಾ ವ್ಯಕ್ತಪಡಿಸಿದ್ದಾರೆ. ಚುನಾವಣಾ ಪ್ರಚಾರದ ವೇಳೆ ಎಲ್ಲ ರಾಜ್ಯಗಳಲ್ಲೂ ನಮಗೆ ಅಭೂತಪೂರ್ವವಾದ ಬೆಂಬಲ ಸಿಕ್ಕಿದ್ದು, ಚುನಾವಣೆಯ ದಿನ ಫಲಿತಾಂಶ ನಮ್ಮ ಪರವಾಗಿರಲಿದೆ ಎಂದು ಭವಿಷ್ಯ ನುಡಿದರು.